ಹೊಳಲ್ಕೆರೆ: ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ಗುರುವಾರ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಚ್.ಆಂಜನೇಯ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಕೊಟ್ರೆನಂಜಪ್ಪ ಪದವಿ ಪೂರ್ವ ಕಾಲೇಜು ಮೈದಾನದ ಬಳಿ ಬೆಳಗ್ಗೆ 11 ಗಂಟೆಗೆ ಆರಂಭವಾದ ಮೆರವಣಿಗೆಯಲ್ಲಿ 50 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡು ದಾಖಲೆ ಬರೆದರು.
ತೆರೆದ ವಾಹನದಲ್ಲಿ ಪ್ರಮುಖ ಮುಖಂಡರ ಜೊತೆ ಮೆರವಣಿಗೆ ಮೂಲಕ ಸಾಗಿದ ಆಂಜನೇಯ ಹಾಗೂ ಇತರೆ ನಾಯಕರುಗಳಿಗೆ ಕಾರ್ಯಕರ್ತರು, ಅಭಿಮಾನಿಗಳು ರಸ್ತೆಯುದ್ದಕ್ಕೂ ಹೂವಿನ ಮಳೆ ಸುರಿಸಿ, ಬೃಹಧಾಕಾರದ ಸೇಬಿನ ಹಾರ ಹಾಕಿ ಜಯಘೋಷ ಮೊಳಗಿಸಿದರು.
ಸುಡು ಬಿಸಿಲನ್ನು ಲೆಕ್ಕಿಸದೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ, ಆಂಜನೇಯ ಅವರಿಗೆ ಬೆಂಬಲ ಸೂಚಿಸಿದರು. ಬನ್ಸ್ ಲಾರಿ ಟ್ರಾಕ್ಟರ್ ಅಪೆ ಗಾಡಿಗಳಲ್ಲಿ ತಂಡೋಪ ತಂಡವಾಗಿ ಕ್ಷೇತ್ರದ ವಿವಿಧ ಮೂಲೆಗಳಿಂದ ಜನ ಆಗಮಿಸಿದ್ದರು. ಕಾಂಗ್ರೆಸ್ ಬಾವುಟ ಮೆರವಣಿಗೆಯಲ್ಲಿ ರಾರಾಜಿಸಿದವು.
ನಾಮಪತ್ರ ಸಲ್ಲಿಕೆಗೂ ಮುನ್ನ ಮೆರವಣಿಗೆಯಲ್ಲಿ ಮಾತನಾಡಿದ ಅಭ್ಯರ್ಥಿ ಆಂಜನೇಯ, ಹೊಳಲ್ಕೆರೆ ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಸಾಮಾನ್ಯ ಕುಟುಂಬದ ನಾನು ರಾಜ್ಯದಲ್ಲಿ ಸಮಾಜ ಕಲ್ಯಾಣ ಸಚಿವನಾಗಿ ಐದು ವರ್ಷ ಆಡಳಿತ ನಡೆಸಲು ಅವಕಾಶ ಕೊಟ್ಟವರು ಹೊಳಲ್ಕೆರೆ ಕ್ಷೇತ್ರದ ಜನ ಎಂದರು.
ಸಚಿವನಾಗಿದ್ದ ಸಂದರ್ಭದಲ್ಲಿ ಎಲ್ಲ ಸಮುದಾಯದವರಿಗೆ ಸಾವಿರಾರು ಕೊಳವೆಬಾವಿ ಕೊರೆಯಿಸಿದ್ದು, ಕೊನೇ ಗಳಿಗೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಬೋರ್‌ವೆಲ್ ಸೌಲಭ್ಯ ಮಂಜೂರು ಮಾಡಿದ್ದೇ. ಆದರೆ, ಚುನಾವಣೆ ಘೋಷಣೆ ಕಾರಣಕ್ಕೆ ಕೊರೆಯಿಸಲು ಸಾಧ್ಯವಾಗಿರಲಿಲ್ಲ. ಆದರೆ, ಬಳಿಕ ಗೆದ್ದ ಎಂ.ಚಂದ್ರಪ್ಪ, ರೈತರಿಗೆ ನನ್ನ ಅವಧಿಯಲ್ಲಿ ಕೊಟ್ಟಿದ್ದ ಕೊಳವೆಬಾವಿ ಸೌಲಭ್ಯ ಕಸಿದುಕೊಂಡರು. ರೈತಸಂಘದವರು ಪ್ರತಿಭಟನೆ ನಡೆಸಿದರು ಸರ್ವಾಧಿಕಾರಿ ರೀತಿ ವರ್ತಿಸಿ, ಅನ್ನದಾತರಿಗೆ ಅನ್ಯಾಯ ಮಾಡಿದರು ಎಂದು ದೂರಿದರು.
ಇಂತಹ ಸರ್ವಾಧಿಕಾರಿ ಧೋರಣೆಯ ವ್ಯಕ್ತಿಯನ್ನು ಸೋಲಿಸಲೇಬೇಕೆಂದು ನನ್ನ ಮೇಲೆ ಒತ್ತಡ ತಂದು ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಚುನಾವಣೆಗೆ ನಿಲ್ಲಿಸಿದ್ದಾರೆ. ಜನರ ಮನವಿಗೆ ಸ್ಪಂದಿಸಿ ಸ್ಪರ್ಧಿಸಿದ್ದು, ಸುಳ್ಳಿನ ರಾಜ ಚಂದ್ರಪ್ಪನಿಗೆ ಜನ ಪಾಠ ಕಲಿಸಲು ಕಾತರದಿಂದ ಕಾಯುತ್ತಿದ್ದಾರೆ ಎಂದರು.
ಹೊಳಲ್ಕೆರೆ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು, ಶಾಲೆ, ಕಾಲೇಜು, ತರಬೇತಿ ಕೇಂದ್ರದ ಕಟ್ಟಡಗಳನ್ನು ನಿರ್ಮಿಸಿದ್ದೇನೆ. ಪ್ರತಿ ಹಳ್ಳಿಗಳ ರಸ್ತೆ ಅಭಿವೃದ್ಧಿಗೊಳಿಸಿದ್ದೇನೆ. ಹತ್ತಾರು ಸಮುದಾಯಗಳ ನಿರ್ಮಾಣ ಮಾಡಲಾಗಿದೆ. ನನ್ನ ಅವಧಿ ಕೆಲಸಗಳನ್ನು ಉದ್ಘಾಟಿಸಿದ ಚಂದ್ರಪ್ಪ, ಇವುಗಳು ನಾನೇ ಮಾಡಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಜನರನ್ನು ದಡ್ಡರು ಎಂದು ಭಾವಿಸಿದಂತೆ ಇದೆ. ಆದರೆ ಜನರು ಪ್ರಜ್ಞಾವಂತರು, ಪ್ರಬುದ್ಧರು ಇದ್ದು, ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿ.ಎಸ್‌ಮಂಜುನಾಥ್, ಓ.ಶಂಕರ್, ಸವಿತಾ ಸೇರಿ ಅನೇಕರು ಕ್ಷೇತ್ರದಲ್ಲಿ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಆಗಿದ್ದರು. ಯಾರಿಗೆ ಟಿಕೆಟ್ ಕೊಟ್ಟಿದ್ದರೂ ನಾನು ಅವರ ಗೆಲುವಿಗೆ ಶ್ರಮಿಸಲು ಸಿದ್ಧನಿದ್ದೇ. ಆದರೆ, ಪಕ್ಷ, ಕೊನೇ ಗಳಿಗೆಯಲ್ಲಿ ನಡೆಸಿದ ಸರ್ವೇ ಆಧಾರದಡಿ ನನಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಇಂತಹ ಸಂದರ್ಭ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಲ್ಲರೂ ನನ್ನ ಗೆಲುವಿಗೆ ಕೈಜೋಡಿಸಿ, ಮೆರಣಿಗೆಯಲ್ಲಿ ಪಾಲ್ಗೊಂಡಿರುವುದು ಪಕ್ಷದ ಬಲವರ್ಧಗೆ ಸಹಕಾರಿ ಆಗಿದೆ ಎಂದರು.
ವೀಕ್ಷಕ ಸಂಜಯ್‌ದತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ ಕೆ ತಾಜಪೀರ್, ಕೆ.ಪಿ.ಸಿ.ಸಿ ಕೋಆರ್ಡಿನೇಟ್ ಡಾ.ರಾಘವೇಂದ್ರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್, ಜೆ. ಜೆ. ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಶಿವಮೂರ್ತಿ, ಮಾಜಿ ಉಪಾಧ್ಯಕ್ಷ ಗಂಗಾಧರ್, ಸದಸ್ಯರಾದ ಶಿವಮೂರ್ತಿ ಲೋಹಿತ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಹೊಳಲ್ಕೆರೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಎಂ.ಪ್ರಕಾಶ್, ಕೆಪಿಸಿಸಿ ಸದಸ್ಯ ಜಿಪಂ ಮಾಜಿ ಉಪಾಧ್ಯಕ್ಷ ಎಸ್. ಎಂ .ಎಲ್ .ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್ ಮೈಲಾರಪ್ಪ ಕೆ.ಪಿ.ಸಂಪತ್ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.