ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರಿಗೆ ಕರ್ನಾಟಕ ಮುಂದಿನ ಸಿಎಂ ಆಯ್ಕೆಯ ನಿರ್ಧಾರವನ್ನು ನಿರ್ಣಯದ ಮೂಲಕ ಹೊರಿಸಲಾಗಿತ್ತು. ಅಲ್ಲದೇ ಕೇಂದ್ರ ವೀಕ್ಷಕರು ತಡರಾತ್ರಿಯವರೆಗೆ ಶಾಸಕರಿಂದ ಸಿಎಂ ಆಯ್ಕೆಯ ಬಗ್ಗೆ ಅಭಿಪ್ರಾಯವನ್ನು ಕೂಡ ಸಂಗ್ರಹಿಸಿದ್ದರು. ಈ ವರದಿಯನ್ನು ಎಐಸಿಸಿ ಅಧ್ಯಕ್ಷಕರಿಗೆ ಸಲ್ಲಿಸಲಾಗಿದ್ದು, ಇಂದು ಕರ್ನಾಟಕ ಸಿಎಂ ಯಾರು ಎನ್ನುವ ಬಗ್ಗೆ ಘೋಷಣೆ ಸಾಧ್ಯತೆ ಇದೆ ಎಂಬುದಾಗಿ ಹೇಳಲಾಗುತ್ತಿದೆ.
ಸಿಎಂ ಆಯ್ಕೆ ಸಂಬಂಧ ಚರ್ಚಿಸುವುದಕ್ಕಾಗಿ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಗೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿತ್ತು. ಸಿದ್ಧರಾಮಯ್ಯ ದೆಹಲಿಗೆ ತೆರಳಿದ್ದರೇ, ಡಿ.ಕೆ ಶಿವಕುಮಾರ್ ಮಾತ್ರ ಅನಾರೋಗ್ಯದ ಕಾರಣ ಕೊನೆಯ ಕ್ಷಣಗಳಲ್ಲಿ ದೆಹಲಿ ಪ್ರವಾಸ ರದ್ದುಗೊಳಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬುದು ಕಗ್ಗಂಟಾಗಿ ಪರಿಣಮಿಸಿದೆ.
Rozgar Mela: 71,000 ಯುವಕರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ, ಇಂದು ಪ್ರಧಾನಿ ಮೋದಿಯಿಂದ ನೇಮಕಾತಿ ಪತ್ರ ವಿತರಣೆ
ಈ ನಡುವೆ, ಕರ್ನಾಟಕದ ಕಾಂಗ್ರೆಸ್ ಕೇಂದ್ರ ವೀಕ್ಷಕರು ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಶಾಸಕರ ಅಭಿಪ್ರಾಯದ ಬಗ್ಗೆ ತಮ್ಮ ವರದಿಯನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ್ದು, ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚಿಸಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.
ಕಾಂಗ್ರೆಸ್ ಉನ್ನತ ಮೂಲಗಳ ಮಾಹಿತಿಯಂತೆ ಡಿ.ಕೆ ಶಿವಕುಮಾರ್ ನಿನ್ನೆ ದೆಹಲಿಗೆ ತೆರಳದ ಕಾರಣ, ಸಿಎಂ ಆಯ್ಕೆ ಕಸರತ್ತು ಸದ್ಯಕ್ಕೆ ಮುಂದೂಡಿಕೆಯಾಗಿದ್ದು, ಇಂದು ಮತ್ತೆ ಮುಂದುವರೆಯುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಟ್ಟೆ ನೋವಿನ ಕಾರಣ ಹೇಳಿ ಬೆಂಗಳೂರಲ್ಲೇ ಉಳಿದಿದ್ದಾರೆ. ಇದೀಗ ಮತ್ತೆ ಡಿಕೆ ಶಿವಕುಮಾರ್ ಇಂದು(ಮೇ 16) ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಯಾರು ಎನ್ನುವುದು ಇಂದೇ ಅಂತಿಮಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಈ ಬಳಿಕ ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಮುಂದಿನ ಸಿಎಂ ಹೆಸರನ್ನು ಘೋಷಿಸಲಾಗುತ್ತರೆ ಎಂಬುದಾಗಿ ಹೇಳಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.