ಬೆಂಗಳೂರು: ಇನ್ನುಮುಂದೆ ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ. ಒಂದು ವೇಳೆ ಬಿಲ್ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಿದ ಮೊದಲ ದಿನಕ್ಕೇ ತನ್ನ ಗ್ಯಾರಂಟಿಗಳ ವಿಚಾರದಲ್ಲಿ ಬಣ್ಣ ಬದಲಿಸುತ್ತಿದೆ. ದಿನ ಕಳೆದಂತೆ ಅದ್ಯಾವ ರೀತಿ ಬಣ್ಣ ಬದಲಿಸಲಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಲಿದೆ. ಎಲ್ಲ ನಿರುದ್ಯೋಗಿಗಳಿಗೆ 3 ಸಾವಿರ ರೂಪಾಯಿ ಎಂದು ಕಾಂಗ್ರೆಸ್‌ನವರು ಹೇಳಿದ್ದರು. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರು ಹಲವಾರು ಭಾಷಣಗಳಲ್ಲಿ ಎಲ್ಲ ನಿರುದ್ಯೋಗಿ ಯುವಕರಿಗೆ 3 ಸಾವಿರ ಎಂದಿದ್ದರು. ಐಟಿಐ ಆದವರಿಗೆ 1,500 ರೂ. ಎಂದಿದ್ದರು. ಈಗ 2022-23ರಲ್ಲಿ ಪದವಿ ಪಡೆದವರಿಗೆ ಮಾತ್ರ ಎಂದು ಹೇಳುತ್ತಿದ್ದಾರೆ. ಖಾಸಗಿ ನೌಕರಿ ಮಾಡುತ್ತಿದ್ದರೆ ಭತ್ಯೆ ಇಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷ ಘೋಷಿಸಿದಂತೆ ಗೃಹಿಣಿಯರಿಗೆ 2 ಸಾವಿರ ನೀಡಲೇಬೇಕು. ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಕೊಡಲೇಬೇಕು. ಮಹಿಳೆಯರಿಗೆ ಬಸ್ ಚಾರ್ಜ್ ಉಚಿತ ಎಂದಿದ್ದೀರಿ, ಅದನ್ನು ಕೊಡಲೇಬೇಕು. ಬಿಪಿಎಲ್ ಕಾರ್ಡ್‍ದಾರರಿಗೆ 10 ಕೆಜಿ ಅಕ್ಕಿ ಕೊಡಲೇಬೇಕು. ಮುಖ್ಯಮಂತ್ರಿಗಳೇ ಹೇಳಿದ ಮೇಲೆ ಯಾರೋ ಬಿಲ್ ಕಲೆಕ್ಟರ್ ಬಂದು ಬಿಲ್ ಕೇಳಿದರೆ, ಆ ಧೈರ್ಯ ಮಾಡಿದರೆ ಅದು ಸಿಎಂ ಆದೇಶಕ್ಕೆ ವಿರುದ್ಧವಾಗುತ್ತದೆ. ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹುಷಾರ್, ಬಿಲ್ ಮುಖ್ಯಮಂತ್ರಿಗಳಿಗೆ ಕಳಿಸಿ ಎನ್ನಬೇಕು. ಯಾರೂ ವಿದ್ಯುತ್ ಬಿಲ್ ಕಟ್ಟಬಾರದು ಎಂದು ತಿಳಿಸಿದರು.