ಬೆಂಗಳೂರು: ಭಾರತ ದೇಶ ಸೇರಿದಂತೆ ಪ್ರಪಂಚವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಚಂದ್ರಯಾನ-3 ನೌಕೆಯ ‘ವಿಕ್ರಮ್’ ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾದಿಂದ ಚಂದ್ರನ ದೂರದ ಪ್ರದೇಶದ ಚಿತ್ರಗಳನ್ನು ಸೆರೆಹಿಡಿದಿದೆ. ‘ವಿಕ್ರಮ್’ನಿಂದ ಇಸ್ರೋ ಸಂಸ್ಥೆಗೆ ಬಂದು ತಲುಪಿರುವ ಚಂದ್ರನ ಈ ಛಾಯಾಚಿತ್ರಗಳು ವಿಜ್ಞಾನಿಗಳನ್ನು ಬೆರಗೊಳಿಸಿವೆ.
ಚಂದ್ರಯಾನ-3 ನೌಕೆಯ ‘ವಿಕ್ರಮ್’ ಲ್ಯಾಂಡಿಂಗ್ನ ದಿನ ಹಾಗೂ ಸಮಯ ನಿಗದಿ: ದೇಶಸೇರಿದಂತೆ ಇಡೀ ವಿಶ್ವವೇ ತುದಿಗಾಲ ಮೇಲೆ ನಿಂತು ಕಾತರದಿಂದ ಕಾಯುತ್ತಿರುವ ಚಂದ್ರಯಾನ-3 ನೌಕೆಯ ಲ್ಯಾಂಡಿಂಗ್ನ ದಿನ ಹಾಗೂ ಸಮಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧಿಕೃತವಾಗಿ ನಿನ್ನೆ (ಭಾನುವಾರ) ಪ್ರಕಟಿಸಿತ್ತು. ಇನ್ನೂ ಎರಡು ದಿನಗಳಲ್ಲಿ ಭಾರತ ಐತಿಹಾಸಿಕ ದಾಖಲೆ ನಿರ್ಮಿಸಲು ಸಜ್ಜಾಗಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಗುರುತುಪಡಿಸಿದ ಸ್ಥಳದಲ್ಲಿ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ಸಂಜೆ 6.04ಕ್ಕೆ ಸರಿಯಾಗಿ ಇಳಿಯಲಿದೆ ಎಂದು ಇಸ್ರೋ ಘೋಷಿಸಿತ್ತು. ಕೋಟ್ಯಂತರ ಭಾರತೀಯರ ಕನಸು ನನಸಾಗಿಸುವಲ್ಲಿ ಈ ಚಂದ್ರಯಾನ-3 ನೌಕೆ ಸಾಧಿಸಿದ ವಿಶ್ವದ ನಾಲ್ಕನೇ ಹಾಗೂ ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
“ಚಂದ್ರಯಾನ-3 ಆಗಸ್ಟ್ 23, 2023 ರಂದು 06.04ಕ್ಕೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಆಗಿ ಇಳಿಯಲಿದೆ. ಇಷ್ಟು ದಿನಗಳ ಪ್ರಯಾಣಕ್ಕೆ ಶುಭ ಕೋರಿದ ಹಾಗೂ ಸಕಾರಾತ್ಮಕ ಮನೋಭಾವಕ್ಕೆ ಧನ್ಯವಾದ. ಮುಂದಿನ ಪ್ರಯಾಣವನ್ನು ಒಟ್ಟಾಗಿ ಮುಂದುವರಿಸೋಣ” ಎಂದು ಇಸ್ರೋ ಟ್ವೀಟ್ ಮಾಡಿತ್ತು. ಜೊತೆಗೆ ಈ ಸಾಹಸವನ್ನು ಇಸ್ರೋದ ವೆಬ್‌ಸೈಟ್, ಅದರ ಯೂಟ್ಯೂಬ್ ಚಾನಲ್, ಫೇಸ್ಬುಕ್ ಹಾಗೂ ಡಿಡಿ ನ್ಯಾಷನಲ್ ಚಾನಲ್ನಲ್ಲಿ 05.27ರಿಂದ ನೇರಪ್ರಸಾರ ಆಗಲಿದೆ ಎಂದು ಹೇಳಿದೆ.