ಬೆಂಗಳೂರು: 500ಕ್ಕೂ ಹೆಚ್ಚು ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳನ್ನು ಮುಚ್ಚಲು, ಅಂತಹ ಕೇಂದ್ರಗಳಿಗೆ ಸಂಯೋಜನೆಗೊಂಡಿದ್ದ ಶಾಲೆಗಳ ಮಕ್ಕಳನ್ನು ಸಮೀಪದ ಇತರೆ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದೆ.
ಹಲವು ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಸರ್ಕಾರಿ ಶಾಲಾ ಮಕ್ಕಳ ಸಂಖ್ಯೆ ಪ್ರತಿವರ್ಷ ಗಣನೀಯವಾಗಿ ಕಡಿಮೆ ಆಗುತ್ತಿರುವುದು, ನಕಲು ತಡೆಯಲು ವಿಫಲವಾಗಿರುವ ಪರೀಕ್ಷಾ ಕೇಂದ್ರಗಳ ಜತೆಗೆ, ನಿಯಮ ಪಾಲಿಸದ ಕೆಲವು ಖಾಸಗಿ ಪರೀಕ್ಷಾ ಕೇಂದ್ರಗಳನ್ನೂ ಮುಚ್ಚಲಾಗುತ್ತಿದೆ.
ದ್ವಿತೀಯ ಪಿಯು ಪರೀಕ್ಷೆಗಳಿಗೆ ಹೋಲಿಸಿದರೆ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿವೆ. ಅಲ್ಲದೇ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ದ್ವಿತೀಯ ಪಿಯು ಪರೀಕ್ಷೆಗಾಗಿ ಹೊಸ ಕೇಂದ್ರಕ್ಕೆ ಅನುಮತಿ ನೀಡಬೇಕಾದರೆ ಆ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಸಂಖ್ಯೆ ಕನಿಷ್ಠ 400 ಇರಬೇಕು ಎಂಬ ನಿಯಮವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದೆ.
ಹಾಗಾಗಿ, ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆ ಇವೆ. ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಅದೇ ಕನಿಷ್ಠ 200 ಮಕ್ಕಳಿದ್ದರೂ ಸಾಕು ಎಸ್ಎಸ್ಎಲ್ಸಿಗೆ ಹೊಸ ಪರೀಕ್ಷಾ ಕೇಂದ್ರ ಮಂಜೂರು ಮಾಡಬಹುದು. ಇದರಿಂದ ಪರೀಕ್ಷಾ ಕೇಂದ್ರಗಳ ಸಂಖ್ಯೆ ಅಧಿಕವಾಗಿದ್ದು, ನಿಯಂತ್ರಣ ಹಾಗೂ ನಿರ್ವಹಣೆಯ ವೈಫಲ್ಯಗಳು ಮರುಕಳಿಸುತ್ತಿವೆ ಎನ್ನುವುದು ಶಿಕ್ಷಣ ಇಲಾಖೆಯ ವಿವರಣೆ.