ಚಿತ್ರದುರ್ಗ : ಪ್ರತಿ ವರ್ಷದಂತೆ ಈ ಬಾರಿಯೂ ನಗರದಲ್ಲಿ ಹಿಂದೂ ಮಹಾ ಗಣಪತಿ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುವುದೆಂದು ಹಿಂದೂ ಮಹಾಗಣಪತಿ ಉತ್ಸವ ಸಮಿತಿ ನೂತನ ಅಧ್ಯಕ್ಷ ಜಿ.ಎಂ.ಸುರೇಶ್ ತಿಳಿಸಿದರು.
ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೆ. 3 ರಂದು ಧ್ವಜಪೂಜೆ, 18 ರಂದು ಗಣಪತಿ ಪ್ರತಿಷ್ಠಾಪನೆಯಾಗಲಿದ್ದು, ಅ.8 ರಂದು ಶೋಭಾಯಾತ್ರೆ ನಂತರ ವಿಸರ್ಜನೆಯಾಗುತ್ತದೆ. ಸಣ್ಣ ಉಪ ಸಮಿತಿಗಳನ್ನು ರಚಿಸಿ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು.
ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಪ್ರಭಂಜನ್ ಮಾತನಾಡಿ ಸಾವರ್ಕರ್ ಹಾಗೂ ಅಶೋಕ್ ಸಿಂಘಾಲ್ ಮಂಟಪದ ಜ.ರಾ.ರಾಮಮೂರ್ತಿ ವೇದಿಕೆಯಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಯಾಗಲಿದೆ. ಹಿಂದೂ ಮಹಾಗಣಪತಿ ಉತ್ಸವ ಸಮಿತಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು, 35 ರಿಂದ 40 ಮಂದಿ ಪದಾಧಿಕಾರಿಗಳಿರುತ್ತಾರೆ. ಹಳಬರ ಜೊತೆ ಹೊಸಬರು ಸೇರಿ ಈ ಬಾರಿ ಶೋಭಾಯಮಾನವಾಗಿ ಶೋಭಾಯಾತ್ರೆಯನ್ನು ನೆರವೇರಿಸಲಾಗುವುದು. ವಿಶೇಷ ಕಲಾ ತಂಡಗಳು ಭಾಗವಹಿಸಲಿವೆ ಎಂದರು.
ರುದ್ರೇಶ್, ಶರಣಣ್ಣ, ಸಂದೀಪ್, ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.