Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಉಡುಪಿ: 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

0

ಉಡುಪಿ: ಉಡುಪಿ ಜಿಲ್ಲೆಯ ಕರಾವಳಿಯಲ್ಲಿ 61 ದಿನಗಳ ಕಾಲ ಮೀನುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಪ್ರತಿ ವರ್ಷವೂ ನೈಋತ್ಯ ಮುಂಗಾರು ಮಳೆ ಆರಂಭಗೊಳ್ಳುವ ಅವಧಿಯಲ್ಲಿ ಮೀನುಗಾರಿಕೆ ನಿಷೇಧಿಸಲಾಗುತ್ತಿದೆ.

ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆ ಹಾಗೂ ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತ್ರೀಕೃತ ದೋಣಿಗಳ ಮತ್ತು 10 ಅಶ್ವಶಕ್ತಿ (ಹೆಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್ಬೋರ್ಡ್ ಅಥವಾ ಔಟ್ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ನಿಷೇಧ ಮಾಡಲಾಗಿದೆ.

ಮಾಣಿಯಲ್ಲಿ ಹಲ್ಲೆ ಪ್ರಕರಣ- ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದ ಕಟೀಲ್, ಶಾಸಕ ರಾಜೇಶ್ ನಾಯಕ್

ಈ ಮೀನುಗಾರಿಕೆ ನಿಷೇಧ ಆದೇಶ ಜೂನ್ 1 ರಿಂದ ಜುಲೈ 31ರ ವರೆಗೆ ಒಟ್ಟು 61 ದಿನಗಳ ಕಾಲ ಜಾರಿಯಲ್ಲಿರುತ್ತದೆ ಎಂದು ಆದೇಶ ತಿಳಿಸಿದೆ. ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿ 10 ಅಶ್ವಶಕ್ತಿಯ ವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಕ/ ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ. ಮೀನುಗಾರಿಕೆ ನಿಷೇಧದ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ 1986ರಲ್ಲಿ ವಿಧಿಸಲಾಗಿರುವ ದಂಡನೆಗೆ ಹೊಣೆಯಾಗುವುದಲ್ಲದೇ, ಒಂದು ವರ್ಷದ ಅವಧಿಗೆ ಡೆಲಿವರಿ ಪಾಯಿಂಟ್‌ನಲ್ಲಿ ರಾಜ್ಯ ಮಾರಾಟಕರ ರಹಿತ ಡೀಸೆಲ್ ಪಡೆಯಲು ಅನರ್ಹರಾಗುತ್ತಾರೆ. ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರು ಈ ಆದೇಶವನ್ನು ಪಾಲಿಸಿ ಸರಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ಮೀನುಗಾರಿಕೆ ನಿಷೇಧ ಏಕೆ?;

ನೈಋತ್ಯ ಮುಂಗಾರು ಆರಂಭದ ಅವಧಿಯಲ್ಲಿ ಮೀನುಗಳ ಸಂತಾನೋತ್ಪತ್ತಿ ಪ್ರಕ್ರಿಯೆ ತೀವ್ರಗೊಳ್ಳಲಿದೆ. ಈ ಸಂದರ್ಭಲ್ಲಿ ಮರಿಗಳು ಮತ್ತು ಮೊಟ್ಟೆಗಳು ನಾಶವಾಗಬಾರದು ಎಂಬ ಕಾರಣಕ್ಕೆ ಪ್ರತಿವರ್ಷ ರಾಜ್ಯದ ಕರಾವಳಿ ಭಾಗದಲ್ಲಿ ಜೂನ್ 1 ರಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರಿಕೆ ನಿಷೇಧ ಮಾಡಲಾಗುತ್ತದೆ. ಪಕ್ಕದ ಕೇರಳ ರಾಜ್ಯದಲ್ಲಿಯೂ ಸಹ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧಿಸಲಾಗುತ್ತದೆ. ಈ ಅವಧಿಯಲ್ಲಿ ಸಾಂಪ್ರದಾಯಿಕ ನಾಡದೋಣಿಗಳಲ್ಲಿ ಮೀನುಗಾರಿಕೆ ನಡೆಸಬಹುದು. ಅಲ್ಲದೇ ಮಳೆಗಾಲದಲ್ಲಿ ಸಮುದ್ರದಲ್ಲಿ ಭಾರೀ ಗಾತ್ರದ ಅಲೆ ಏಳುತ್ತದೆ. ಭಾರೀ ಗಾಳಿ ಬೀಸುತ್ತದೆ. ಈ ಅವಧಿಯಲ್ಲಿ ಸಮುದ್ರದ ನಡುವೆ ಮೀನುಗಾರಿಕೆಗೆ ತೆರಳಿ ಸಿಕ್ಕಿಹಾಕಿಕೊಳ್ಳಬಾರದು ಎಂಬ ಕಾರಣಕ್ಕೆ 61 ದಿನ ಮೀನುಗಾರಿಕೆ ನಿಷೇಧಿಸಲಾಗುತ್ತದೆ.

ಪ್ರವಾಸಿ ಬೋಟ್ ಚಟುವಟಿಕೆಗೆ ನಿಷೇಧ;

ಮೀನುಗಾರಿಕೆ ಮಾತ್ರವಲ್ಲ ಉಡುಪಿ ಜಿಲ್ಲೆಯ ಮಲ್ಪೆ ಬಂದರು ವ್ಯಾಪ್ತಿಯ ಮಲ್ಪೆ ಬೀಚ್ ಹಾಗೂ ಸೀವಾಕ್ ಪ್ರದೇಶಗಳಲ್ಲಿ ಪ್ರವಾಸಿ ಬೋಟ್ ಚಟುವಟಿಕೆಗಳನ್ನು ಮತ್ತು ಸೈಂಟ್ ಮೇರೀಸ್ ದ್ವೀಪಕ್ಕೆ ತೆರಳುವ ಪ್ರವಾಸಿ ಬೋಟ್ ಚಟುವಟಿಕೆಗಳನ್ನು ಸಹ ನಿಷೇಧಿಸಲಾಗಿದೆ.
ಹಾರ್ಬರ್ ಕ್ರಾಫ್ಟ್‌ ನಿಯಮಗಳ ಅನ್ವಯ ಮೇ 16 ರಿಂದ ಸೆಪ್ಟಂಬರ್ 15ರ ವರೆಗೆ ಬೋಟ್ ಚಟುವಟಿಕೆ ಸ್ಥಗಿತಗೊಳಿಸಲಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಕಡಲ್ಕೊರೆತದ ಕುರಿತು ಸಭೆ; ನೈಋತ್ಯ ಮುಂಗಾರು ಆರಂಭವಾಗುವ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಮಳೆಗಾಳಿ, ಕಡಲ್ಕೊರೆತ ಸೇರಿದಂತೆ ಪ್ರಾಕೃತಿಕ ವಿಕೋಪಗಳಿಂದ ಸಂಭವಿಸಬಹುದಾದ ಹಾನಿಗಳನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಮುಂಜಾಗೃತ ಕ್ರಮಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಉಡುಪಿ ತಾಲೂಕು ತಹಶೀಲ್ದಾರ್ ರವಿ ಎಸ್. ಅಂಗಡಿ ಸಭೆ ನಡೆಸಿದರು. ಈ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಆರ್. ಪಿ ನಾಯ್ಕ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ್ ಖಾರ್ವಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ರಾಜ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ಭೂ ವಿಜ್ಞಾನಿ ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.

 

Leave A Reply

Your email address will not be published.