ಉಪ್ಪಿನಂಗಡಿ: ಅಲೆಮಾರಿ ಜನಾಂಗದ ದಂಪತಿಗಳು ಮನೆಯೊಂದರಲ್ಲಿ ತಮ್ಮ ಒಂದು ತಿಂಗಳ ಹಸುಗೂಸು ಸಹಿತ ಇಬ್ಬರು ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿದ್ದು, ಹೆತ್ತವರ ಪತ್ತೆಗಾಗಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಮಕ್ಕಳನ್ನು ಪುತ್ತೂರಿನ ರಾಮಕೃಷ್ಣಾಶ್ರಮಕ್ಕೆ ಒಪ್ಪಿಸಲಾಗಿದೆ.
ಬೆಳ್ತಂಗಡಿ ತಾಲೂಕು ಕರಾಯ ಪರಿಸರದಲ್ಲಿ ಅಲೆಮಾರಿ ಜನಾಂಗದ ದಂಪತಿ ಬುಟ್ಟಿ ಹೆಣೆಯುವ ಕಾಯಕದೊಂದಿಗೆ ಆಗಾಗ ಕಾಣಿಸಿಕೊಂಡು ಪರಿಸರದ ನಿವಾಸಿಗರ ವಿಶ್ವಾಸಗಳಿಸಿದ್ದರು. ಮದ್ಯ ವ್ಯಸನಿಗಳಾದ ಇವರು ಅಲ್ಲಲ್ಲಿ ಮಲಗಿಕೊಂಡು ಅವ್ಯವಸ್ಥಿತ ಜೀವನ ನಡೆಸುತ್ತಿದ್ದರು. ದಂಪತಿಗೆ ದಿನೇಶ ಎಂಬ ನಾಲ್ಕು ವರ್ಷದ ಮಗನಿದ್ದು, ಒಂದು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು.
ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೆಲವೇ ಕ್ಷಣಗಳಲ್ಲಿ ಸಭೆ
ಈ ಎರಡು ಮಕ್ಕಳನ್ನು ಜೂ. 2ರಂದು ಕರಾಯ ಗ್ರಾಮದ ಫಾತಿಮಾ ಎಂಬವರ ಮನೆಯೊಂದರಲ್ಲಿ ಬಿಟ್ಟು ನಾವು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ಈ ದಂಪತಿ ತಿಳಿಸಿದ್ದರು. ಆದರೆ 2 ದಿನ ಕಳೆದರೂ ಹೆತ್ತವರು ಕಾಣಿಸಿಕೊಳ್ಳದೇ ಹೋದಾಗ ಕಳವಳಗೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಮಕ್ಕಳನ್ನು ಭಾನುವಾರ ಪುತ್ತೂರಿನ ರಾಮಕೃಷ್ಣಾಶ್ರಮಕ್ಕೆ ಒಪ್ಪಿಸಿದರು.
ಮಕ್ಕಳನ್ನು ಬಿಟ್ಟು ಹೋಗಿ ಮೂರು ದಿನವಾದರೂ ಹೆತ್ತವರ ಪತ್ತೆ ಇಲ್ಲದಿರುವುದನ್ನು ಗಮನಿಸಿದ ಫಾತಿಮಾ ಸೋಮವಾರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿ, ಮಕ್ಕಳನ್ನು ತನ್ನ ಮನೆಯಲ್ಲಿ ಬಿಟ್ಟು ಹೋಗಿರುವ ದಂಪತಿಯನ್ನು ಪತ್ತೆ ಹಚ್ಚಲು ವಿನಂತಿಸಿದ್ದಾರೆ. ದಂಪತಿಯ ಪೈಕಿ ಗಂಡನ ಹೆಸರು ತಿಳಿದಿಲ್ಲವೆಂದೂ, ಪತ್ನಿಯ ಹೆಸರು ಆಕೆಯ ಮಗ ತಿಳಿಸಿದ ರೀತಿಯಲ್ಲಿ ಲೀಲಾ ಎಂಬುದಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.