ರಾಂಚಿ (ಜಾರ್ಖಂಡ್): ಇಲ್ಲಿನ ಮಹಿಳೆಯೊಬ್ಬರು ಏಕಕಾಲಕ್ಕೆ ಐದು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಈ ಮಕ್ಕಳು 7 ತಿಂಗಳಿಗೆ ಜನ್ಮ ತಾಳಿವೆ. ಕಡಿಮೆ ತೂಕ ಹೊಂದಿರುವುದರಿಂದ ಶಿಶುಗಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಜಾರ್ಖಂಡ್‌ನ ರಿಮ್ಸ್ ಆಸ್ಪತ್ರೆ ಈ ಸಂತೋಷದ ಘಳಿಗೆಗೆ ಸಾಕ್ಷಿಯಾಗಿದೆ. ಚತ್ರಾ ಜಿಲ್ಲೆಯ ಇತ್ಖೋರಿ ನಿವಾಸಿಯಾದ ಮಹಿಳೆ ಗರ್ಭಿಣಿಯಾದ ಏಳು ತಿಂಗಳೊಳಗೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ವಿವಾಹವಾಗಿ ಹಲವು ವರ್ಷ ಕಳೆದರೂ ಮಕ್ಕಳಾಗದ ಕಾರಣ ಕುಟುಂಬಸ್ಥರು ಚಿಂತಿತರಾಗಿದ್ದರು. ಮಹಿಳೆ ಕೆಲವು ದೈಹಿಕ ನ್ಯೂನತೆಗಳಿಂದ ಬಳಲುತ್ತಿದ್ದರು. ಇದರಿಂದ ಗರ್ಭ ಧರಿಸಲು ತೊಂದರೆಯಾಗಿತ್ತು. ಇದಕ್ಕಾಗಿ ಆಕೆ ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ಡಾ.ಶಶಿಬಾಲಾ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಸಾಮಾನ್ಯ ಹೆರಿಗೆಯಾಗಿ ಐದು ಮಕ್ಕಳು ಜನಿಸಿವೆ. ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಐದು ಮಕ್ಕಳು ಏಕಕಾಲದಲ್ಲಿ ಜನಿಸಿದ್ದರೆ, ಈ ಮಕ್ಕಳನ್ನು ಪಡೆದ ಕುಟುಂಬದ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ಜಾರ್ಖಂಡ್‌ನಲ್ಲಿ ತಾಯಿಯೊಬ್ಬರು ಏಕಕಾಲಕ್ಕೆ ಐದು ಶಿಶುಗಳಿಗೆ ಜನ್ಮ ನೀಡಿರುವುದು ಇದೇ ಮೊದಲು ಎನ್ನಲಾಗಿದೆ. ನೆರೆಯ ಬಿಹಾರದಲ್ಲಿ ಮಹಿಳೆಯೊಬ್ಬರು ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ದರು.