Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ ಎಂದು ಹೇಳಿಲ್ಲ: ಈಶ್ವರ ಖಂಡ್ರೆ

0

ಬೆಂಗಳೂರು: ಏಟ್ರಿಯಾ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಜು.28ರಂದು ನಡೆದ ಅಂತರ ಜೀವಿ (ಪ್ರಭೇದ) ಸಮಾವೇಶದಲ್ಲಿ ಪಾಲ್ಗೊಂಡಿದ್ದ ತಾವು, “ಪಶ್ಚಿಮ ಘಟ್ಟದಲ್ಲಿ ಜೀವವೈವಿಧ್ಯ ಮತ್ತು ಸಸ್ಯ ಸಂಕುಲ ಸಂರಕ್ಷಣೆಗೆ ಸರ್ಕಾರ ಬದ್ಧ’’ ಎಂದು ಹೇಳಿದ್ದೇ ಹೊರತು ‘ಡಾ. ಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ’ ಎಂದು ಹೇಳಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಆ ಕಾರ್ಯಕ್ರಮದಲ್ಲಿ ಕೆಲವರು ಪಶ್ಚಿಮ ಘಟ್ಟದ ಬಗ್ಗೆ ಮತ್ತು ಕಸ್ತೂರಿ ರಂಗನ್ ವರದಿ ಕುರಿತಂತೆ ನನಗೆ ಪ್ರಶ್ನಿಸಿದಾಗ, ಕೇಂದ್ರ ಸರ್ಕಾರ ಸಂಜಯ್ ಕುಮಾರ್ ನೇತೃತ್ವದ ಪುನರ್ ಪರಿಶೀಲನಾ ಸಮಿತಿ ರಚಿಸಿದ್ದು, ಸಮಿತಿ ಸದಸ್ಯರು ತಮ್ಮನ್ನು ಇತ್ತೀಚೆಗೆ ಭೇಟಿ ಮಾಡಿದ್ದರು, ಈ ಸಮಿತಿ ಡಿಸೆಂಬರ್ ವೇಳೆಗೆ ವರದಿ ಸಲ್ಲಿಸಲಿದ್ದು, ಆ ವರದಿ ಬಂದ ಬಳಿಕ ಸಂಪುಟದ ಉಪ ಸಮಿತಿಯಲ್ಲಿ ಅದರ ಸಾಧಕ ಬಾಧಕ ಚರ್ಚಿಸಿ, ಪಶ್ಚಿಮಘಟ್ಟದ  ಎಲ್ಲ ಬಾಧ್ಯಸ್ಥರೊಂದಿಗೆ (Stake holders) ಮಾತುಕತೆ ನಡೆಸಿ ನಂತರ ಸರ್ಕಾರ ವರದಿ ಕುರಿತಂತೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾಗಿ ಹೇಳಿದ್ದಾರೆ.

ಕಸ್ತೂರಿ ರಂಗನ್ ವರದಿ 10 ವರ್ಷಗಳಷ್ಟು ಹಳೆಯದಾಗಿದೆ. ಇಂದಿಗೆ ಅದು ಪ್ರಸ್ತುತವೇ ಎಂಬ ವಾದವೂ ಇದೆ. ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದರೆ ಜೀವನ, ಜೀವನೋಪಾಯಕ್ಕೆ ತೊಂದರೆ ಆಗುತ್ತದೆ ಎಂಬ ಭೀತಿಯೂ ಆ ಭಾಗದ ಜನರಲ್ಲಿದೆ. ಹೀಗಾಗಿ ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಸರ್ಕಾರ ಯಾವುದೇ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಕೆಂಪು ಪ್ರವರ್ಗದ (Red category) ಕೈಗಾರಿಕೆಗಳು ನಡೆಯಬಾರದು, ಅದರ ತ್ಯಾಜ್ಯ ಪಶ್ಚಿಮ ಘಟ್ಟದ ಜಲ ಮೂಲಗಳಿಗೆ ಅಪಾಯ ತಂದೊಡ್ಡುತ್ತದೆ ಎಂಬ ಆತಂಕ ಇದೆ. ಅದು ಸರಿ ಎನಿಸುತ್ತದೆ. ಆದರೆ, ಅಂಗನವಾಡಿ, ಆಸ್ಪತ್ರೆ, ಶಾಲೆ, ಜನವಸತಿ, ಮೂಲಸೌಕರ್ಯ ವಿಚಾರದಲ್ಲಿ ಹಾಗೆ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಇದರಿಂದ ಹಲವು ದಶಕದಿಂದ ಅಲ್ಲಿಯೇ ಬದುಕು  ಕಟ್ಟಿಕೊಂಡಿರುವ ಸ್ಥಳೀಯ ಜನರಿಗೆ  ತೊಂದರೆ ಆಗುತ್ತದೆ. ಪರಿಸರವೂ ಉಳಿಯಬೇಕು, ಜನರ ಜೀವನೋಪಾಯಕ್ಕೂ ಧಕ್ಕೆ ಆಗಬಾರದು, ಸುಸ್ಥಿರ ಅಭಿವೃದ್ಧಿ ಸರ್ಕಾರದ ನಿಲುವು ಎಂದು ತಿಳಿಸಿದ್ದಾರೆ.

ಕಸ್ತೂರಿ ರಂಗನ್ ವರದಿಯಲ್ಲಿ ಹಲವು ಸಡಿಲಿಕೆಗೂ ಸಂಜಯ್ ಕುಮಾರ್ ಸಮಿತಿ ಸಮ್ಮತಿಸುತ್ತಿದೆ. ವಿಶ್ವದ ಜೀವವೈವಿಧ್ಯತೆಯ 8 ಅದ್ಭುತ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟ ಉಳಿಸುವ ಜವಬ್ದಾರಿಯೂ ನಮ್ಮ ಮೇಲಿದೆ. ಆದರೆ “ಕಸ್ತೂರಿ ರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ’’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿರುವ ರೀತಿ ತಾವು ಯಾವುದೇ ಹೇಳಿಕೆ ನೀಡಿಲ್ಲ. ಅಂತಹ ಯಾವುದೇ ನಿರ್ಧಾರವನ್ನು ಸರ್ಕಾರ ಮಾಡಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಪಶ್ಚಿಮಘಟ್ಟ ಮತ್ತು ಅಲ್ಲಿನ ಸಸ್ಯ ಸಂಕುಲ ಮತ್ತು ಪ್ರಾಣಿ ಸಂಕುಲ ಸಂರಕ್ಷಣೆಗೆ ಸರ್ಕಾರ ಬದ್ಧ ಎಂದು ಹೇಳಿದ್ದ, ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿ ಕೆಲವು ಮಾಧ್ಯಮಗಳಲ್ಲಿ ಮಾತ್ರ ಈ ರೀತಿ ವರದಿ ಪ್ರಕಟಿಸಲಾಗಿದೆ. ಈ ಬಗ್ಗೆ ಬೀದರ್ ನಲ್ಲಿ ನಿನ್ನೆ ನಡೆದ ಪತ್ರಿಕಾ ದಿನಾಚರಣೆಯಲ್ಲೂ ತಾವು ಸ್ಪಷ್ಟೀಕರಣ ನೀಡಿದ್ದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Leave A Reply

Your email address will not be published.