ಕಾಂಗ್ರೆಸ್ ಆಂತರಿಕ ಭಿನ್ನಮತ ಸ್ಫೋಟ – ಎಐಸಿಸಿ ಅಧ್ಯಕ್ಷರಿಗೆ ನಾಲ್ವರು ದಲಿತ ಸಚಿವರ ಪತ್ರ- ದಾಸ್ ನಾಮ ನಿರ್ದೇಶನಕ್ಕೆ ಆಕ್ಷೇಪ
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೈ ಪಕ್ಷದಲ್ಲಿನ ಆಂತರಿಕ ಕಲಹವೀಗ ಜಗಜ್ಜಾಹೀರಾಗಿದೆ. ನಿವೃತ್ತ ಇ.ಡಿ. ಅಧಿಕಾರಿ ಸುಧಾಮದಾಸ್ ಅವರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶಕ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿನ ಶೀತಲ ಸಮರ ಭುಗಿಲೆದ್ದಿದೆ. ಇತ್ತೀಚೆಗೆ ಪಕ್ಷಕ್ಕೆ ಸೇರಿದ ಸುಧಾಮ್ ದಾಸ್ ಅವರ ಹೆಸರನ್ನು ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಹೊರಟಿರುವ ಬಗ್ಗೆ ನಾಲ್ವರು ದಲಿತ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪತ್ರ ಬರೆಯುವುದರ ಮೂಲಕ ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಯನ್ನು ಪ್ರಶ್ನಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಈ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಪ್ರಾತಿನಿಧ್ಯವನ್ನು ಪಾಲಿಸಿಲ್ಲ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಇದು ಕಾಂಗ್ರೆಸ್ ನೊಳಗೆ ಉದ್ಭವಿಸಿರುವ ಭಿನ್ನಮತವನ್ನು ಜಗಜ್ಜಾಹೀರು ಮಾಡಿದೆ. ಗೃಹ ಸಚಿವ ಡಾ. ಪರಮೇಶ್ವರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಮತ್ತೂಂದು ಉದಾಹರಣೆ ದೊರೆತಂತಾಗಿದೆ. ವಿಶೇಷವಾಗಿ ಸುಧಾಮ್ ದಾಸ್ ನಾಮನಿರ್ದೇಶನದ ಬಗ್ಗೆ ಈ ನಾಲ್ವರು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದ್ದು, ಅವರ ಬದಲು ದಲಿತ ಸಮುದಾಯಕ್ಕೆ ಸೇರಿದ ಹಿರಿಯರಿಗೆ ಅವಕಾಶ ನೀಡಬೇಕಿತ್ತು ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯ ನಾಯಕರು ಅಥವಾ ಹೈಕಮಾಂಡ್ ಈ ವಿಷಯವನ್ನು ನಮ್ಮೊಂದಿಗೆ ಚರ್ಚಿಸಿಲ್ಲ. ನಾವು ತುಂಬಾ ನಿರಾಶೆಗೊಂಡಿದ್ದೇವೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಾದೇಶಿಕ ಸಮತೋಲನ ಮತ್ತು ಸಾಮಾಜಿಕ ಎಂಜಿನಿಯರಿಂಗ್ ಅನುಸರಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ನಾಲ್ವರು ಸಚಿವರು ಪತ್ರದಲ್ಲಿ ವಿವರಿಸಿದ್ದಾರೆ. ಇನ್ನು, ಇದಕ್ಕೆ ಟಾಂಗ್ ನೀಡಿರುವ ಬಿಜೆಪಿ ನಾಯಕರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕೊನೆಗೂ ದಲಿತ ನಾಯಕರು ಎಚ್ಚರಗೊಂಡಿದ್ದಾರೆ. ಸಿದ್ದರಾಮಯ್ಯ ದಲಿತ ವಿರೋಧಿ ನಡೆಯನ್ನು ಪ್ರಶ್ನಿಸಿ ಹೈಕಮಾಂಡ್‌ಗೆ ಸುದೀರ್ಘವಾದ ಪತ್ರ ಬರೆದಿದ್ದಾರೆ. ಪತ್ರ ಬರೆದ ಗುತ್ತಿಗೆದಾರರ ವಿರುದ್ಧ ದೂರುಕೊಟ್ಟು ವಿಚಾರಣೆಗೆ ಒಳಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದೀಗ ಯಾವ ಠಾಣೆಯಲ್ಲಿ ಈ ಬಹಿರಂಗ ಪತ್ರದ ವಿರುದ್ಧ ದೂರು ಕೊಡುವರು ಎಂದು ಲೇವಡಿ ಮಾಡಿದ್ದಾರೆ.