ಅಹಮದಾಬಾದ್: ಬಿಪೊರ್‌ಜಾಯ್ ಚಂಡಮಾರುತವು ರಾಜ್ಯದ ಕಛ್ ಕರಾವಳಿಯನ್ನು ಬಾಧಿಸುವ ಭೀತಿ ಇರುವುದರಿಂದ, ಮುನ್ನೆಚ್ಚರಿಕೆಯಾಗಿ ಎಂಟು ಜಿಲ್ಲೆಗಳ ಒಟ್ಟು 37,800 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ.
ಕರಾವಳಿ ಪ್ರದೇಶದಲ್ಲಿ ವಾಸವಿದ್ದ 37,794 ಜನರನ್ನು ಇದುವರೆಗೆ ಸ್ಥಳಾಂತರಿಸಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಚಂಡಮಾರುತವು, ಜಖೌ ಬಂದರು ಪ್ರದೇಶದಲ್ಲಿ ಜೂನ್ 15ರ ಸಂಜೆ ವೇಳೆಗೆ ಭೂಕುಸಿತಕ್ಕೆ ಕಾರಣವಾಗಬಹುದು ಎಂದು ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಮಂಗಳವಾರ ರಾತ್ರಿ ರಾಜ್ಯ ಸರ್ಕಾರದ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು, ಚಂಡಮಾರುತ ಪರಿಸ್ಥಿತಿ ನಿರ್ವಹಣೆಗೆ ಮಾಡಿಕೊಂಡಿರುವ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.
ಕಛ್, ದೇವ್‌ಭೂಮಿ ದ್ವಾರ್ಕಾ, ಪೋರಬಂದರ್, ಜಾಮ್‌ನಗರ ಜಿಲ್ಲೆಗಳಲ್ಲಿ ಚಂಡಮಾರುತ ಹೆಚ್ಚಿನ ಪರಿಣಾಮ ಬೀರಲಿದೆ. ಗಾಳಿಯ ವೇಗ ಗಂಟೆಗೆ 125–150 ಕಿ.ಮೀ. ಇರಲಿದೆ. ಭಾರಿ ಮಳೆ, ಪ್ರವಾಹ ಪರಿಸ್ಥಿತಿಯೂ ಎದುರಾಗಬಹುದು ಎಂದು ಐಎಂಡಿ ಈಗಾಗಲೇ ಎಚ್ಚರಿಸಿದೆ. ಸಮುದ್ರ ತೀರದಿಂದ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸರ್ಕಾರ ತೀರ್ಮಾನಿಸಿದೆ. ಸ್ಥಳಾಂತರ ಕಾರ್ಯಾಚರಣೆ ಬುಧವಾರವೂ ಮುಂದವರಿಯಲಿದೆ . ಚಂಡಮಾರುತದಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.