ನವದೆಹಲಿ : ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಪ್ರಯೋಗಗಳನ್ನು ಕೈಗೊಂಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈಗ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ.
ಡ್ರೋನ್ ಮೂಲಕ ರಕ್ತ ರವಾನೆ (ಬ್ಲಡ್ ಡೆಲಿವರಿ) ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದು, ಇದರ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಕಂಡಿದೆ. ಗುರುವಾರ i-DRONE ಮೂಲಕ ರಕ್ತ ರವಾನೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ಕೋವಿಡ್ ಸಂಕಷ್ಟ ಕಾಲದಲ್ಲಿ ಐ–ಡ್ರೋನ್ ಮೂಲಕ ದೂರದ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನೂ ರವಾನಿಸಲಾಗಿತ್ತು. 10 ಯುನಿಟ್ ರಕ್ತದ ಮಾದರಿಯನ್ನು ಹೊತ್ತ ಐ–ಡ್ರೋನ್ ನೋಯ್ಡಾದ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ನವದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ ರಕ್ತವನ್ನು ರವಾನಿಸಿದೆ. ಡ್ರೋನ್ ಮೂಲಕ ರಕ್ತ ರವಾನೆ ಮಾಡಿರುವ ಪ್ರಯೋಗ ಯಶಸ್ವಿಯಾಗಿರುವುದ್ದಕ್ಕೆ ಐಸಿಎಂಆರ್ ಸಂತಸ ವ್ಯಕ್ತಪಡಿಸಿದೆ.
‘ಇಂದು ಡ್ರೋನ್ ಮೂಲಕ ರಕ್ತ ರವಾನೆ ಮಾಡುವ ಪ್ರಾಯೋಗಿಕ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಕಡಿಮೆ ತಾಪಮಾನದಲ್ಲಿ ರಕ್ತ ರವಾನೆ ಮಾಡಬೇಕಿದ್ದು, ಈ ಸವಾಲನ್ನೂ ಗೆದ್ದಿದ್ದೇವೆ. ತಾಪಮಾನವನ್ನು ನಿರ್ವಹಿಸಿದ್ದಲ್ಲದೆ, ರಕ್ತದ ಮಾದರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡಿದ್ದೇವೆ‘ ಎಂದು ಐಸಿಎಂಆರ್‌ನ ಮಹಾನಿರ್ದೇಶಕ ಡಾ ರಾಜೀವ್ ಬಹ್ಲ್ ಹೇಳಿದರು.
‘ಡ್ರೋನ್ ಜೊತೆಗೆ ಮತ್ತೊಂದು ರಕ್ತದ ಮಾದರಿಯನ್ನು ಆಂಬ್ಯುಲೆನ್ಸ್ ಮೂಲಕ ಕಳುಹಿಸಲಾಗಿತ್ತು. ಎರಡು ವಿಧಾನಗಳನ್ನು ಬಳಸಿ ಕಳುಹಿಸಲಾದ ರಕ್ತದ ಮಾದರಿಯಲ್ಲಿ ಯಾವುದೇ ವ್ಯತ್ಯಾಸ ಕಾಣಿಸದಿದ್ದರೆ ಡ್ರೋನ್ ಮೂಲಕ ರಕ್ತ ರವಾನೆ ಮಾಡುವ ವಿಧಾನವನ್ನು ದೇಶಾದ್ಯಂತ ಪರಿಚಯಿಸಲಾಗುವುದು‘ ಎಂದು ತಿಳಿಸಿದರು. ಹಲವಾರು ದೇಶಗಳಲ್ಲಿ ಈಗಾಗಲೇ ಡ್ರೋನ್ ಮೂಲಕ ರಕ್ತ ರವಾನಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ.