ಚಿತ್ರದುರ್ಗ: ರಾಜ್ಯದಲ್ಲಿ ನಂದಿನಿ ಹಾಲು ಬಿಟ್ಟರೆ ಬೇರೆ ರಾಜ್ಯದ ಹಾಲನ್ನು ಮಾರಾಟ ಮಾಡುವುದು ಬೇಡ, ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುಜರಾತ್ ರಾಜ್ಯದ ಅಮುಲ್ ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಖಂಡಿಸಿ ಪ್ರತಿಭಟನೆಯನ್ನು ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದ ರೈತರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮವನ್ನು ಖಂಡಿಸಿ, ರಾಜ್ಯದ ಉತ್ಪನ್ನವಾದ ನಂದಿನಿ ಹಾಲು ಮತ್ತು ಅದರ ಉತ್ಪನ್ನವನ್ನು ಮಾತ್ರ ಮಾರಾಟ ಮಾಡಬೇಕಿದೆ ಬೇರೆ ರಾಜ್ಯದ ಹಾಲನ್ನು ಮಾರಾಟ ಮಾಡುವುದರಿಂದ ನಮ್ಮ ಹಾಲಿನ ಮೇಲೆ ಪರಿಣಾಮ ಬೀರಲಿದೆ. ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ರೈತರು ಬದುಕು ಕಷ್ಟವಾಗಲಿದೆ. ಇದನ್ನು ನಂಬಿಕೊಂಡು ಸಣ್ಣ, ಅತಿ ಸಣ್ಣ ರೈತರು ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಇದರೊಂದಿಗೆ ಲಕ್ಷಾಂತರ ಜನ ಉದ್ಯೋಗವನ್ನು ನಡೆಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಗುಜರಾತ್ ಹಾಲು ಅಮೂಲ್ ಮಾರಾಟದಿಂದಾಗಿ ನಮ್ಮ ನಂದಿನಿ ಹಾಲು ಮಾರಾಟ ಕಡಿಮೆಯಾಗಲಿದೆ ಇದನ್ನು ನಂಬಿಕೊಂಡ ಜನರು ಬದುಕು ಕಷ್ಠವಾಗಲಿದೆ. ರಾಜ್ಯ ಸರ್ಕಾರ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ, ಕೇಂದ್ರ ಸರ್ಕಾರವನ್ನು ಓಲೈಸುವುದಕ್ಕಾಗಿ ನಮ್ಮ ರೈತರ ಮೇಲೆ ಅವರ ಬದುಕಿನ ಮೇಲೆ ದುಷ್ಪರಿಣಾಮವನ್ನು ಬೀರುವ ಈ ರೀತಿಯಾದ ಕಾರ್ಯವನ್ನು ಮಾಡುತ್ತಿದೆ. ಇದನ್ನು ಯಾವ ಚುನಾಯತ ಪ್ರತಿನಿಧಿಗಳು ಸಹಾ ವಿರೋಧಿಸಿಲ್ಲ ನಮ್ಮ ದುರಂತ ಎಂದು ಜಿಲ್ಲಾಧ್ಯಕ್ಷ ಜಿ.ಸುರೇಶ್ಬಾಬು ತಿಳಿಸಿದರು.
ಯಾದವ ರೆಡ್ಡಿ ಮಾತನಾಡಿ, ನಂದಿನಿಯನ್ನು ನಂಬಿಕೊಂಡು ರಾಜ್ಯದಲ್ಲಿ 75 ಲಕ್ಷ ಜನ ಬದುಕನ್ನು ಕಟ್ಟಿಕೊಂಡಿದ್ದಾರೆ. ಗುಜರಾತ್ ಮೂಲದ ಅಮೂಲ್ ಧಾಳಿಯಿಂದಾಗಿ ಇವರ ಜೀವನ ಸಂಕಷ್ಟಕ್ಕೆ ಈಡಾಗಲಿದೆ. ಈಗಾಗಲೇ ಸರ್ಕಾರಗಳು ತಮ್ಮ ಸ್ವಾಮ್ಯದ ಹಲವಾರು ಕಂಪನಿಗಳನ್ನು ಬೇರೆಯವರಿಗೆ ಮಾರಾಟ ಮಾಡುವುದರ ಮೂಲಕ ಖಾಸಗೀಕರಣ ಮಾಡುತ್ತಿದೆ, ಇದೇ ಮಾದರಿಯಲ್ಲಿ ರಾಜ್ಯದ ನಂದಿನಿಯನ್ನು ಸಹಾ ಅಮೂಲ ಕಂಪನಿಗೆ ಮಾರಾಟ ಮಾಡುವ ಹಿನ್ನಾರ ಎಂದು ದೂರಿದರು.
ರಾಜ್ಯದಲ್ಲಿ ಅಮೂಲ್ ಹಾಲು ಮಾರಾಟಕ್ಕೆ ಪ್ರಯತ್ನ ಮಾಡಿದರೆ ರೈತ ಸಂಘದಿಂದ ಬೃಹತ್ದಾದ ಹೋರಾಟವನ್ನು ಮಾಡಲಾಗುವುದು.ರಾಜ್ಯದಲ್ಲಿ ಹೈನುಗಾರಕೆಯನ್ನು ನಂಬಿಕೊಂಡು ಹಲವಾರು ಜನತೆ ತಮ್ಮ ಬದುಕನ್ನು ನಡೆಸುತ್ತಿದ್ದಾರೆ. ಇದಕ್ಕೆ ಸರ್ಕಾರಗಳು ಕೊಳ್ಳಿ ಇಡಭಾರದೆಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಹೊರಕೇರಪ್ಪ ಮಾತನಾಡಿ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ರೈತರ ಮೇಲೆ ಸರ್ಕಾರಗಳ ಗಧಾ ಪ್ರಹಾರ ಹೆಚ್ಚಾಗಿದೆ. ಸರ್ಕಾರ ಈ ಹಿಂದೆ ಅಡಿಕೆಯನ್ನು ಆಮದು ಮಾಡಿಕೊಳ್ಳುವುದರ ಮೂಲಕ ಅಡಿಕೆ ಬೆಳೆಗಾರರನ್ನು, ಹತ್ತಿಯನ್ನು ಅಮದು ಮಾಡಿಕೊಳೂವುದರ ಮೂಲಕ ಹತ್ತಿ ಬೆಳೆಗಾರರನ್ನು, ರೇಷ್ಮೆಯನ್ನು ಚೀನಾದಿಂದ ಅಮುದು ಮಾಡಿಕೊಳ್ಳುವುದರ ಮೂಲಕ ರೇಷ್ಮೆ ಬೆಳೆಗಾರರನ್ನು ಮುಗಿಸುವ ರೀತಿಯಲ್ಲಿ ಮಾಡುತ್ತಿದೆ. ಇದೇ ಮಾದರಿಯಲ್ಲಿ ಗುಜರಾತ್ ಅಮೂಲ್ ಹಾಲನ್ನು ನಮ್ಮ ರಾಜ್ಯಕ್ಕೆ ತರುವುದರ ಮೂಲಕ ನಮ್ಮ ಬ್ರಾಂಡ್ ಆದ ನಂದಿನಿಯನ್ನು ಮೂಲೆ ಗುಂಪು ಮಾಡುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು.
ಈ ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶಿವುಯಾದವ್, ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ರುದ್ರಸ್ವಾಮಿ, ತಾಲ್ಲೂಕು ಅಧ್ಯಕ್ಷರಾದ ಧನಂಜಯ, ಹಿರಿಯೂರು ತಾ.ಅಧ್ಯಕ್ಷರಾದ ಶಿವಕುಮಾರ್, ಉಪಾಧ್ಯಕ್ಷರಾದ ಮೇಟಿಕುರ್ಕಿ ತಿಪ್ಪೇಸ್ವಾಮಿ, ಯುವ ಘಟಕದ ಅಧ್ಯಕ್ಷ ಚೇತನ ಕುಮಾರ್, ಮುಖಂಡರುಗಳಾದ ಓಂಕಾರಪ್ಪ, ಕಾಂತರಾಜ್, ರೇವಣ್ಣ, ಬಸವರಾಜ್, ತಿಪ್ಪೇಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.