ಚಿತ್ರದುರ್ಗ: ಕೊಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭೈರೇನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಕಲ್ಲು ತೂರಾಟ ನಡೆಸಿರುವ ಕಿಡಿಗೇಡಿಗಳ ಕೃತ್ಯವನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಘು ಆಚಾರ್, ಪ್ರಜಾಪ್ರಭುತ್ವದಲ್ಲಿ ಮತ ಯಾಚಿಸುವುದು ಅವರವರ ಹಕ್ಕು, ಪ್ರಚಾರಕ್ಕೆ ಅಡ್ಡಿ ಪಡಿಸುವುದು, ಗಲಾಟೆ ಮಾಡುವುದು, ಕಲ್ಲು ತೂರಾಟ ನಡೆಸುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ, ರಾಜಕೀಯ ಬೇರೆ ವೈಯುಕ್ತಿಕ ಸಂಬಂಧಗಳು ಬೇರೆ, ಚುನಾವಣೆಯನ್ನು ನ್ಯಾಯುತವಾಗಿ ಎದುರಿಸಬೇಕೆ ಹೊರತು ಈ ರೀತಿಯ ಕಿಡಿಗೇಡಿತನದಿಂದ ರಾಜಕೀಯ ಮಾಡಬಾರದು, ಹೀಗಾಗಿ ಕೂಡಲೇ ಚುನಾವಣಾ ಆಯೋಗ, ಪೊಲೀಸ್ ಇಲಾಖೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು, ಇಲ್ಲದಿದ್ದರೆ ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.