ತುಮಕೂರು: ಪ್ರೇಯಸಿಯ ಕತ್ತು ಕುಯ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಯಳನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಭಟ್ಟರಹಳ್ಳಿಯ ಬಿ.ಎಸ್.ವಿನಯಕುಮಾರ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಅದೇ ಜೀವಿತಾ (17) ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಈಕೆ ತುಮಕೂರಿನ ಕಾಲೇಜು ಒಂದರಲ್ಲಿ ಓದುತ್ತಿದ್ದು, ಈ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣಳಾಗಿದ್ದಳು. ವಿನಯಕುಮಾರ್ ಗ್ರಾಮದ ಸಿದ್ದರಾಮೇಶ್ವರ ದೇಗುಲದ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಕೆಲ ದಿನಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚಿಗೆ ಇಬ್ಬರ ನಡುವೆ ಬಿರುಕು ಉಂಟಾಗಿತ್ತು.
ಇದರಿಂದ ಕೋಪಗೊಂಡಿದ್ದ ವಿನಯಕುಮಾರ್ ಗುರುವಾರ (ಮೇ 11) ಮಂಜಾನೆ 5:30ರ ವೇಳೆಗೆ ಯುವತಿಯ ಮನೆಗೆ ತೆರಳಿ ಮಚ್ಚಿನಿಂದ ಆಕೆಯ ಕುತ್ತಿಗೆಗೆ ಬಲವಾಗಿ ಬೀಸಿದ್ದಾನೆ. ಬಳಿಕ ಮಾರಣಾಂತಿಕವಾಗಿ ಗಾಯಗೊಂಡಿರುವ ಆಕೆ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಲ್ಲೆ ನಡೆಸಿದ ಬಳಿಕ ವಿನಯಕುಮಾರ್ ಕಣ್ಮರೆಯಾಗಿದ್ದ. ನಾಪತ್ತೆಯಾದ ಆತನಿಗಾಗಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಗ್ರಾಮದ ಕಲ್ಯಾಣಿ ಬಳಿ ಆತನ ಟೀ ಶರ್ಟ್ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡು ಅಗ್ನಿಶಾಮಕ ದಳದ ಸಿಬ್ಬಂದಿ ಕಲ್ಯಾಣಿಯಲ್ಲಿ ಹುಡುಕಾಟ ನಡೆಸಿದಾಗ ಆತನ ಮೃತದೇಹ ಪತ್ತೆಯಾಗಿದೆ.