ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತೃತೀಯಲಿಂಗಿಯೊಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎರಡು ಬಾರಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದ ಸಿ.ಆಂಜಿನಮ್ಮ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಗ್ರಾಮಸ್ಥರು ನಿಲ್ಲಿದ್ದರು.
ಪರಿಶಿಷ್ಟ ವರ್ಗದ ಅಭ್ಯರ್ಥಿಗೆ ಮೀಸಲಾದ ಸ್ಥಾನದಲ್ಲಿ ಆಂಜಿನಮ್ಮ ಪ್ರತಿನಿಧಿಸಿದ್ದು, ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿಯ 19 ಸದಸ್ಯರು ಸರ್ವಾನುಮತದಿಂದ ನಿರ್ಣಯಿಸಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಅನುಸೂಚಿತ ಪಂಗಡ ಮಹಿಳೆ ಮೀಸಲಾತಿ ಅಡಿಯಲ್ಲಿ ಗೀತಾ ಗಂಡ ಬಿ.ಹನುಮಂತಪ್ಪ ಚೋರನೂರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಸಹಾಯಕ ಕೃಷಿ ಇಲಾಖೆಯ ನಿರ್ದೇಶಕರಾದ ಮಂಜುನಾಥರಡ್ಡಿ ತಿಳಿಸಿದರು.
ಆಂಜಿನಮ್ಮ ಅವರು ಮಾತನಾಡಿ, ತನ್ನ ಗೆಲುವಿನ ಶ್ರೇಯಸು ಗ್ರಾಮಸ್ಥರಿಗೆ ಸಲ್ಲುತ್ತದೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವಿರಲಿಲ್ಲ. ಆದರೆ ಗ್ರಾಮದ ಹಿರಿಯರು ನನ್ನನ್ನು ಸ್ಪರ್ಧಿಸುವಂತೆ ಕೇಳಿದರು, ಇದೀಗ ನನಗೆ ದೊಡ್ಡ ಪಟ್ಟವನ್ನೇ ನೀಡಿದ್ದಾರೆ. ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಕಾಮಗಾರಿಗಳನ್ನು ತರಲು ಶ್ರಮಿಸುತ್ತೇನೆ ಎಂದರು.
ಸಚಿವ ಚೆಲುವರಾಯಸ್ವಾಮಿ ವಿರುದ್ದ ಪತ್ರದ ಮೂಲಕ ರಾಜ್ಯಪಾಲರಿಗೆ ದೂರು: ಸಿದ್ದರಾಮಯ್ಯ ಹೇಳಿದ್ದೇನು?
ನಿವಾಸಿಗಳಿಗೆ ಉತ್ತಮ ಕುಡಿಯುವ ನೀರು, ಬೀದಿ ದೀಪಗಳು, ರಸ್ತೆಗಳು ಮತ್ತು ಇತರ ಮೂಲ ಸೌಕರ್ಯಗಳ ಅವಶ್ಯಕತೆ ಇದೆ. ಖಂಡಿತ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಗ್ರಾಮ ಪಂಚಾಯಿತಿಗೆ ಹಣ ತರಲು ಅಧಿಕಾರಿಗಳು ಮತ್ತು ಶಾಸಕರೊಂದಿಗೆ ಮಾತುಕತೆ ನಡೆಸುತ್ತೇನೆ. ಜೊತೆಗೆ ನಮ್ಮಂತಹ ಅನೇಕ ಮಂಗಳಾಮುಖಿ ಮಹಿಳೆಯರನ್ನು ಗ್ರಾಮಮಟ್ಟದಲ್ಲಿ ಸಬಲೀಕರಣ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಬ್ದುಲ್ ಸಾಬ್ ಖಾದ್ರಿ, ಚುನಾವಣಾಧಿಕಾರಿ ಮಂಜುನಾಥ ರೆಡ್ಡಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.