ಬೆಂಗಳೂರು: ಚುನಾವಣೆ ಕಳೆದು ಹೊಸ ಸರ್ಕಾರ ಬಜೆಟ್ ಮಂಡನೆ ಮಾಡಿದ್ರೂ, ಇನ್ನೂ ಕೂಡ ಪ್ರತಿ ಪಕ್ಷ ಬಿಜೆಪಿ ಹೊಸ ರಾಜ್ಯಾಧ್ಯಕ್ಷರನ್ನಾಗಲಿ, ವಿಪಕ್ಷ ನಾಯಕನನ್ನಾಗಲಿ ಆಯ್ಕೆ ಮಾಡಿಲ್ಲ. ಇದೇ ಸಂದರ್ಭದಲ್ಲಿ ಇದೀಗ ಈ ಎರಡೂ ಕೊರತೆಗಳನ್ನು ತುಂಬಲು ಬಿಜೆಪಿ ಪಕ್ಷದ ಹೈಕಮಾಂಡ್ ಮುಂದಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಹೌದು..! ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿ.ಟಿ.ರವಿ ಹಾಗೂ ಪ್ರತಿಪಕ್ಷ ನಾಯಕನಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆಯ್ಕೆ ಮಾಡಲು ಬಿಜೆಪಿ ಹಿರಿಯ ನಾಯಕರು ಸಜ್ಜಾಗಿದ್ದಾರೆ ಎನ್ನಲಾಗಿದೆ. ಸಿ.ಟಿ.ರವಿ ಹಾಗೂ ಯತ್ನಾಳ್ ನಾಯಕತ್ವಕ್ಕೆ ಹೈಕಮಾಂಡ್ ಮಣೆ ಹಾಕಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಸಿ.ಟಿ.ರವಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಯತ್ನಾಳ್ ಗೆ ವಿಪಕ್ಷ ಸ್ಥಾನ ನೀಡಬೇಕು ಎನ್ನುವ ಸಲಹೆಗಳು ರಾಜ್ಯ ನಾಯಕರಿಂದಲೂ ಬಂದಿವೆ. ಜೊತೆಗೆ ಒಕ್ಕಲಿಗ ರಾಜ್ಯಾಧ್ಯಕ್ಷ, ಲಿಂಗಾಯತ ವಿಪಕ್ಷ ನಾಯಕ ಎಂಬ ಜಾತಿಯ ಲೆಕ್ಕಾಚಾರಗಳು ಇಲ್ಲಿ ಕೆಲಸ ಮಾಡಲಿದೆ ಎನ್ನುವ ಚಿಂತನೆಗಳಿವೆ.