ಅಧಿಕಾರ ಕಳೆದುಕೊಂಡಿರುವ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಕೊನೆಯಲ್ಲಿ ವಿವಿಧ ಇಲಾಖೆಗಳಲ್ಲಿ ಮಂಜೂರು ಮಾಡಲಾದ ಸುಮಾರು ಇಪ್ಪತ್ತು ಸಾವಿರ ಕೋಟಿ ಮೌಲ್ಯದ ಕಾಮಗಾರಿಗಳು ಹಾಗೂ ಟೆಂಡರ್ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.
ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳಲ್ಲಿ ಹೊಸದಾಗಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಮತ್ತು ಬಾಕಿ ಇರುವ ಬಿಲ್ ಪಾವತಿ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಅವರು ಪ್ರಮಾಣವಚನ ಸ್ವೀಕರಿಸಿದ ದಿನವೇ ಆದೇಶ ಹೊರಡಿಸಲಾಗಿತ್ತು. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಸೋಮವಾರ ಟಿಪ್ಪಣಿಯೊಂದನ್ನು ಕಳುಹಿಸಿರುವ ಸಿದ್ದರಾಮಯ್ಯ, ವಿವಿಧ ಇಲಾಖೆಗಳಲ್ಲಿ ಹಿಂದಿನ ಕೆಲವು ತಿಂಗಳಲ್ಲಿ ಮಂಜೂರು ಮಾಡಲಾದ ಕಾಮಗಾರಿಗಳ ತಡೆಗೆ ಸೂಚಿಸಿದ್ದಾರೆ.
ಕಡಬ: ಬಲೂನ್ ಕಟ್ಟಿಕೊಂಡು ಕುಮಾರಧಾರ ನದಿಗೆ ಹಾರಿ ಉದ್ಯಮಿ ಚಂದ್ರಶೇಖರ್ ಆತ್ಮಹತ್ಯೆ
ಹತ್ತು ಹಲವು ಯೋಜನೆಯಡಿ ಅನುದಾನದ ಲಭ್ಯತೆ ಇಲ್ಲದೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಅನುದಾನದ ಕೊರತೆ, ಭೂಸ್ವಾಧೀನದ ತೊಂದರೆ ಇದ್ದರೂ ತರಾತುರಿಯಲ್ಲಿ ಟೆಂಡರ್ ನಡೆಸಿರುವ ದೂರುಗಳಿವೆ’ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ. ತರಾತುರಿಯಲ್ಲಿ ನಿಯಮ ಉಲ್ಲಂಘಿಸಿ ಟೆಂಡರ್‌ಗಳನ್ನು ಕರೆಯಲಾಗಿದೆ. ಆ ಕಾಮಗಾರಿಗಳಿಗೆ 20,000 ಕೋಟಿ ವೆಚ್ಚಕ್ಕೆ ಅನುಮೋದನೆ ಅಗತ್ಯವಿದೆ. ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಕೆಲವೆಡೆ ವ್ಯಾಪಕ ಅಕ್ರಮಗಳು ನಡೆದಿರುವ ದೂರುಗಳೂ ಇವೆ ಎಂದಿದ್ದಾರೆ. ಈ ಎಲ್ಲಾ ಕಾಮಗಾರಿಗಳನ್ನೂ ಪರಿಶೀಲಿಸುವ ಅಗತ್ಯವಿದೆ. ಈ ಕಾರಣಕ್ಕಾಗಿ ಮುಂದಿನ ಆದೇಶದವರೆಗೆ ಈಗಾಗಲೇ ಆರಂಭವಾಗಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು ಮತ್ತು ಟೆಂಡರ್ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.
ವಿಶ್ವೇಶ್ವರಯ್ಯ ಜಲ ನಿಗಮ (ವಿಜೆಎನ್‌ಎಲ್), ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್) ಸೇರಿದಂತೆ ನೀರಾವರಿ, ಇಂಧನ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಜಲಜೀವನ್ ಮಿಷನ್ ಸೇರಿದಂತೆ ನೂರಾರು ಕಾಮಗಾರಿಗಳಿಗೆ ತರಾತುರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಇವುಗಳ ಮೊತ್ತ 20 ಸಾವಿರ ಕೋಟಿ ರೂ. ಆಗುತ್ತದೆ ಎಂದು ಅಂದಾಜಿಸಿದೆ. ಇವ್ಯಾವುದಕ್ಕೂ ಹಣಕಾಸಿನ ಸೂಕ್ತ ಅನುದಾನವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದಲ್ಲಿ ಹೇಳಿದ್ದಾರೆ.