ಉಡುಪಿ: ಮತ ಎಣಿಕೆಯಲ್ಲಿ ಬಿಜೆಪಿ ಪಕ್ಷವು 125 ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುತ್ತದೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭವಿಷ್ಯ ನುಡಿದಿದ್ದಾರೆ. ಇಂದು(ಶುಕ್ರವಾರ) ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಾವು ನಿಖರವಾಗಿ ಪಡೆದಿರುವ ಮಾಹಿತಿಯ ಆಧಾರದಲ್ಲಿ ಕಂಡುಕೊಂಡ ಫಲಿತಾಂಶ ಇದಾಗಿದ್ದು, 58,000 ಬೂತುಗಳು ಹೊಂದಿರುವ ರಾಜ್ಯದಲ್ಲಿ 31 ಸಾವಿರ ಬೂತಗಳಲ್ಲಿ ನಾವು ಹೆಚ್ಚಿನ ಅಂತರ ಪಡೆದಿದ್ದೇವೆ ಎಂದರು.
2018 ರ ಚುನಾವಣೆಗೆ ಹೋಲಿಸಿದರೆ ಈ ಬಾರಿ 24,000 ಅಧಿಕ ಮತಗಟ್ಟೆಗಳಲ್ಲಿ ಹೆಚ್ಚು ಮತ ಪಡೆದಿದ್ದೇವೆ. 2018 ರಲ್ಲಿ ನಾವು 104 ಸ್ಥಾನಗಳನ್ನು ಗೆದ್ದಿದ್ದೇವು. ಹೀಗಾಗಿ 34,000 ಬೂತ್ ಗಳಲ್ಲಿ ಪಡೆದ ಮತಗಳ ಹಿನ್ನೆಲೆಯಲ್ಲಿ ನಾವು ನಿಶ್ಚಯವಾಗಿ ಬಹುಮತ ಸಾಧಿಸಲಿದ್ದೇವೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಐದು ಕ್ಷೇತ್ರ ಗೆಲ್ಲುತ್ತೇವೆ. ಉಡುಪಿ, ಕುಂದಾಪುರದಲ್ಲಿ ಬಹುದೊಡ್ಡ ಅಂತರದಲ್ಲಿ ಗೆಲ್ಲಲಿದ್ದು, ಉಳಿದ ಕ್ಷೇತ್ರಗಳಲ್ಲೂ ನಿಶ್ಚಯವಾಗಿ ಗೆಲುವು ಸಾಧಿಸುತ್ತೇವೆ. ಉತ್ತಮ ಮತದಾನವಾದಾಗ ಭಾರತೀಯ ಜನತಾ ಪಕ್ಷಕ್ಕೆ ಅನುಕೂಲವಾಗಿದೆ.ಕಡಿಮೆ ಮತದಾನವಾದಾಗ ಬಿಜೆಪಿ ಗೆಲುವು ಕಂಡಿದ್ದು ಕಡಿಮೆ. ಈ ಬಾರಿ ಬಹು ದೊಡ್ಡ ಪ್ರಮಾಣದಲ್ಲಿ ಮತದಾನವಾಗಿದ್ದು, ಮತದಾನದ ಸಂಖ್ಯೆ ಹೆಚ್ಚಿರುವುದರಿಂದ ಬಿಜೆಪಿಯ ಗೆಲುವಿಗೆ ಪೂರಕವಾಗಲಿದೆ. ಬದಲಾವಣೆಗಾಗಿ ಜನ ಹೆಚ್ಚಿನ ಮತ ಹಾಕಿರಬಹುದು ಮತ್ತು ಆ ಬದಲಾವಣೆ ನಮ್ಮ ಪರವಾಗಿಯೇ ಇರಬಹುದು ಎಂದರು.