ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಸುತ್ತಿರುವ ತೆರಿಗೆದಾರರಿಗೆ ಶೇ. 5 ರಷ್ಟು ರಿಯಾಯಿತಿಯು ಜೂನ್ 30 ರವರೆಗೆ ವಿಸ್ತರಣೆಯಾಗಿದೆ.
ಮೇ ಅಂತ್ಯಕ್ಕೆ ಮುಕ್ತಾಯವಾಗಬೇಕಿದ್ದ ರಿಯಾಯಿತಿ ಅವಧಿಯನ್ನು ಒಂದು ತಿಂಗಳು ವಿಸ್ತರಣೆ ಮಾಡುವಂತೆ ಬಿಬಿಎಂಪಿ ಮಾಜಿ ಸದಸ್ಯರು ಮನವಿ ಮಾಡಿದ್ದರು. ಪ್ರತಿವರ್ಷವೂ ಏಪ್ರಿಲ್ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಾತ್ರ ಶೇ. 5 ರಷ್ಟು ರಿಯಾಯಿತಿ ಸಿಗುತ್ತಿತ್ತು. ಆದರೆ, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಕೆಲಸಗಳು ಚಾಲ್ತಿಯಲ್ಲಿದ್ದ ಕಾರಣ ಕಂದಾಯ ವಿಭಾಗದ ಸಿಬ್ಬಂದಿ ಚುನಾವಣಾ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಹಲವಾರು ತೆರಿಗೆದಾರರು ನಿಗದಿತ ಸಮಯದಲ್ಲಿ ಆಸ್ತಿ ತೆರಿಗೆ ಪಾವತಿಸಲು ಸಾಧ್ಯವಾಗಿರುವುದಿಲ್ಲ.
ಶಾಲೆಗಳಲ್ಲಿ ಇನ್ನು ಸಂವಿಧಾನದ ಪ್ರಸ್ತಾವನೆ ಓದುವುದು ಕಡ್ಡಾಯ: ಸಚಿವ ಮಹಾದೇವಪ್ಪ
ಹೀಗಾಗಿ ರಿಯಾಯಿತಿ ಅವಧಿಯನ್ನು ಜೂನ್ ಅಂತ್ಯದವರೆಗೂ ವಿಸ್ತರಿಸುವಂತೆ ಕೋರಲಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಸಾರ್ವಜನಿಕರ ಅನುಕೂಲ ಹಾಗೂ ಪಾಲಿಕೆಯ ಆರ್ಥಿಕ ಹಿತದೃಷ್ಟಿಯಿಂದ 2023-24ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸುವ ತೆರಿಗೆದಾರರಿಗೆ ಶೇ. 5 ರಷ್ಟು ರಿಯಾಯಿತಿ ಅವಧಿಯನ್ನು ಈ ಮಾಸಾಂತ್ಯದವರೆಗೂ ವಿಸ್ತರಿಸಿ ಸರ್ಕಾರ ಆದೇಶಿಸಿದೆ.