ಬೆಂಗಳೂರು: ಶಾಲಾ ಶಿಕ್ಷಣ ಆಯುಕ್ತರ ಕಚೇರಿ 2023-24ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ತಾತ್ಕಾಲಿಕವಾಗಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ. ಮೇ 29ರಿಂದ ಈ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿವೆ.
ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಿ ಇಲಾಖೆಯ ಆಯುಕ್ತರು ಜ್ಞಾಪನ ಪತ್ರ ಹೊರಡಿಸಿದ್ದಾರೆ. ಯಾವ ಜಿಲ್ಲೆಗೆ ಎಷ್ಟು ನೇಮಕಾತಿ ಮಾಡಿಕೊಳ್ಳಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ 7 ವಿರೋಧ ಪಕ್ಷಗಳು ಭಾಗಿ
ಸರ್ಕಾರದ ಆದೇಶ 25/05/2023, ಸರ್ಕಾರದ ಆದೇಶ ಸಂಖ್ಯೆ ದಿನಾಂಕ 27/04/2022 ಮತ್ತು ಸರ್ಕಾರದ ಆದೇಶ ಸಂಖ್ಯೆ ದಿನಾಂಕ 18/06/2022 ಉಲ್ಲೇಖ ಮಾಡಿ ಈ ಆದೇಶವನ್ನು ಹೊರಡಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇರ ನೇಮಕಾತಿ ಮೂಲಕ ಹುದ್ದೆ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಎದುರಾಗಿ ತಾತ್ಕಾಲಿಕವಾಗಿ ಒಟ್ಟು 27000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಷರತ್ತುಗಳು ಅನ್ವಯ; ಸರ್ಕಾರದ ಆದೇಶದಲ್ಲಿ (ಸರ್ಕಾರವು ಈಗಾಗಲೇ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಿರುವ ಒಟ್ಟು 15000 ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ಹುದ್ದೆಗಳ ಅಡಿಯಲ್ಲಿ ಪ್ರಸ್ತುತ ನೇಮಕಾತಿಯ ಎಲ್ಲಾ ಅಂತಿಮ ಪ್ರಕ್ರಿಯೆಗಳು ಮುಕ್ತಾಯಗೊಂಡು 2023-24 ನೇ ಸಾಲಿನಲ್ಲಿ ಹಾಜರಾಗುವ ಒಟ್ಟು ಶಿಕ್ಷಕರುಗಳ ಸಂಖ್ಯೆಗೆ ಅನುಗುಣವಾಗಿ ಕಡಿತಗೊಳಿಸುವ ಷರತ್ತಿಗೊಳಪಟ್ಟು ನೇಮಕಾತಿಗೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ವೃಂದ ಬಲ ನಿಗದಿಗೊಳಿಸಿರುವ ದಿನಾಂಕ 02/02/2018ರ ಇಲಾಖಾ ಅಧಿಸೂಚನೆಯಲ್ಲಿನ ಸೂಚನೆಗಳನ್ನು ಹಾಗೂ 2022-23 ನೇ ಸಾಲಿನಲ್ಲಿ ಅಗತ್ಯತೆ/ ಹೆಚ್ಚುವರಿ ಶಿಕ್ಷಕರ ಹುದ್ದೆಗಳ ಗುರುತಿಸುವಿಕೆ ಮತ್ತು ಮರು ಹೊಂದಾಣಿಕೆ ಪ್ರಕ್ರಿಯೆ ಸಂಬಂಧ ನೀಡಲಾಗಿರುವ ಹುದ್ದೆ ಹಂಚಿಕೆ, ಸೂಚನೆಗಳನ್ನು ಪಾಲಿಸಿ ಪ್ರತಿ ಶಾಲೆಗೆ ಅಗತ್ಯವಿರುವ ಶಿಕ್ಷಕರ ಹುದ್ದೆಗಳ ಕುರಿತಂತೆ, ಶಾಲಾವಾರು ವೃಂದ ಮಂಜೂರಾತಿ ಕ್ರಮಗಳನ್ನು ಈಗಾಗಲೇ ಜಿಲ್ಲಾ ಹಂತದಲ್ಲಿ ನಿಯಮಾನುಸಾರ ಕೈಗೊಳ್ಳಲಾಗಿರುತ್ತದೆ ಎಂದು ಹೇಳಿದೆ.
ಸದರಿ ಆಧಾರದಲ್ಲಿ ಎಲ್ಲಿ ಅಗತ್ಯ ಖಾಲಿ ಹುದ್ದೆಗಳಿವೆಯೋ ಅಂತಹ ಖಾಲಿ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲು ಪ್ರಸ್ತುತ ಲಭ್ಯವಿರುವ ಖಾಲಿ ಹುದ್ದೆಗಳ ಮಾಹಿತಿಯಂತೆ ಅತಿಥಿ ಶಿಕ್ಷಕರ ಹುದ್ದೆಗಳನ್ನು ಜಿಲ್ಲಾ ಉಪನಿರ್ದೇಶಕರ ವಿಲೇವಾರಿಯಲ್ಲಿ ಹಂಚಿಕೆ ಮಾಡಲಾಗಿದೆ. ಕೆಲವು ಷರತ್ತುಗಳಿಗೆ ಒಳಪಡಿಸಿ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
* ಖಾಲಿ ಇರುವ ಅಗತ್ಯ ಹುದ್ದೆಗಳಿಗೆ ಮಾತ್ರ ಆದ್ಯತೆ ಮೇರೆಗೆ ಅತಿಥಿ ಶಿಕ್ಷಕರನ್ನು ತ್ವರಿತವಾಗಿ ನೇಮಕಾತಿ ಮಾಡಲು ಜಿಲ್ಲಾ ಉಪನಿರ್ದೆಶಕರು ತಾಲ್ಲೂಕುವಾರು ಹುದ್ದೆಗಳ ಮರು ಹಂಚಿಕೆಯನ್ನು ದಿನಾಂಕ 26/05/2023 ರ ಒಳಗಾಗಿ ಕಡ್ಡಾಯವಾಗಿ ಮಾಡತಕ್ಕದು, ತಾಲ್ಲೂಕುವಾರು ಹುದ್ದೆಗಳ ಹಂಚಿಕೆ ಆದೇಶದ ಪ್ರತಿಯನ್ನು ಅಂದೇ ಈ ಕಛೇರಿಗೆ ಇ-ಮೇಲ್ ಮೂಲಕ ಸಲ್ಲಿಸುವುದು.
* ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿಯನ್ನು ಸಂಬಂಧಿಸಿದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರುಗಳ ಮೂಲಕವೇ ಮಾಡುವುದು.
* ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರನ್ನು ಪ್ರಮುಖವಾಗಿ ಆದ್ಯತೆ ಮೇರೆಗೆ ಗ್ರಾಮೀಣ ಪ್ರದೇಶಗಳಲ್ಲಿನ ಖಾಲಿ ಹುದ್ದೆಗಳಿಗೆ ಹಾಗೂ ಶಿಕ್ಷಕರ ರಹಿತ ಶಾಲೆಗಳಿಗೆ/ ಹೆಚ್ಚು ವಿದ್ಯಾರ್ಥಿಗಳಿರುವ ಖಾಲಿ ಹುದ್ದೆಗಳಿಗೆ ಮೊದಲ ಆದ್ಯತೆ ನೀಡುವುದು.
* ರಾಜ್ಯದಲ್ಲಿರುವ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳು/ ಬೆಂಗಳೂರು ಪಬ್ಲಿಕ್ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಶೇಕಡ 10 ರಷ್ಟು ಅತಿಥಿ ಶಿಕ್ಷಕರನ್ನು ಆದ್ಯತೆ ಮೇರೆಗೆ ನೇಮಕಾತಿ ಮಾಡುವುದು.
* ಅತಿಥಿ ಶಿಕ್ಷಕರನ್ನು ಆಯಾ ಹುದ್ದೆಗೆ ನಿಗದಿಪಡಿಸಿದ ಕನಿಷ್ಟ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡತಕ್ಕದ್ದು. * ಅತಿಥಿ ಶಿಕ್ಷಕರ ಹಾಜರಾತಿ ವಹಿಯನ್ನು ಪ್ರತ್ಯೇಕವಾಗಿ ನಿರ್ವಹಿಸುವುದು.
* ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಗೌರವ ಸಂಭಾವನೆ ದರ ಮಾಹೆಯಾನ ರೂ. 10,000 ಆಗಿರುತ್ತದೆ. ನೇಮಕಗೊಂಡ ತಾಲ್ಲೂಕುವಾರು ಅತಿಥಿ ಶಿಕ್ಷಕರ ಮಾಹಿತಿಯನ್ನು ಕ್ರೂಢೀಕರಿಸಿ ಜಿಲ್ಲೆಯಿಂದ ಅನುದಾನ ಬೇಡಿಕೆ/ ವಿವರಗಳನ್ನು ಸಲ್ಲಿಸುವುದು, ತಾಲ್ಲೂಕುವಾರು ಬೇಡಿಕೆಯನ್ನಾಧರಿಸಿ ತಾಲ್ಲೂಕು ಪಂಚಾಯತ್‌ಗಳಿಗೆ ನೇರವಾಗಿ ಆರ್ಥಿಕ ಇಲಾಖೆಯಿಂದ ಅನುದಾನ ಬಿಡುಡೆಯಾಗುತ್ತದೆ.
ಜಿಲ್ಲಾವಾರು ವಿವರಗಳು; 27 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಜಿಲ್ಲಾವಾರು ಹಂಚಿಕೆಯ ವಿವರ ಹೀಗಿದೆ. ಬೆಳಗಾವಿ 1046, ಬಾಗಲಕೋಟೆ 1130, ವಿಜಯಪುರ 1115, ಕಲಬುರಗಿ 1706, ಬೀದರ್ 681, ರಾಯಚೂರು 1540, ಕೊಪ್ಪಳ 1035, ಗದಗ 471, ಧಾರವಾಡ 540, ಉತ್ತರ ಕನ್ನಡ 250 ಹುದ್ದೆಗಳು.