ಬೆಂಗಳೂರು: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯದ ಕೆಲ ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಚಿತ್ರದುರ್ಗ ಸೇರಿದಂತೆ ಕೆಲ ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಫೀಲ್ಡ್ಗೆ ಇಳಿದಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿರುವ ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಮನೆ ಮೇಲೆ ರೇಡ್ ಆಗಿದ್ದು ಪರಿಶೀಲನೆ ನಡೆಯುತ್ತಿದೆ.
ದಾವಣಗೆರೆಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಿವೃತ್ತ ಡಿಸಿಎಫ್ ನಾಗರಾಜ್ ಅವರ ಶಿವಮೊಗ್ಗದ ಮನೆ ಹಾಗೂ ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಅವರ ಶಿಕಾರಿಪುರದಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.
ಹಾಗೂ ನಿವೃತ್ತ ಡಿಸಿಎಫ್ ನಾಗರಾಜ್ ಅವರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ತೋಟದ ಮನೆಯ ಮೇಲೂ ದಾಳಿ ನಡೆದಿದೆ.
ಇಬ್ಬರು ಅಧಿಕಾರಿಗಳ ಏಳು ಸ್ಥಳಗಳ ಮೇಲೆ ಏಕ ಕಾಲಕ್ಕೆ ರೇಡ್ ಆಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿದೆ.