ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ, ನಂತರದಲ್ಲಿ ಹನಿ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಹಾಗೂ ಸಂಸದರಾದ ಎ. ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಾಣಿ ವಿಲಾಸ ಸಾಗರ ಜಲಾಶಯಕ್ಕೆ 05 ಟಿ.ಎಂ.ಸಿ ನೀರು ಹರಿಸಲು ತೀರ್ಮಾನ ಆಗಿರುವಂತೆ, ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿನ 367 ಕೆರೆಗಳನ್ನು ಆದ್ಯತೆ ಆಧಾರದ ಮೆಲೆ ಕೆರೆಗಳನ್ನು ತುಂಬಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಕೆರೆಗಳು ತುಂಬಿದರೆ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ, ಹನಿ ನೀರಾವರಿಗೆ ನಂತರದ ಆದ್ಯತೆ ನೀಡಲಿ. ಹೀಗಾಗಿ 367 ಕೆರೆಗಳಿಗೆ ನೀರು ತುಂಬಿಸಿದ ನಂತರವೇ ಸರ್ಕಾರ ಮಾರ್ಪಾಡು ಮಾಡಿದ ಯೋಜನೆಯಂತೆ ಹನಿ ನೀರಾವರಿಗೆ ತದ ನಂತರದ ಪ್ರಾಶಸ್ತ್ಯ ನೀಡುವಂತೆ ಸಚಿವರು ಒತ್ತಾಯಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಬಜೆಟ್‍ನಲ್ಲಿ ಹನಿ ನೀರಾವರಿಗೆ ಹಾಗೂ ಕೆರೆಗಳನ್ನು ತುಂಬಿಸಲು 5300 ಕೋಟಿ ರೂ. ಅನುದಾನ ಒದಗಿಸಲು ಘೋಷಣೆಯಾಗಿದ್ದು, 60 : 40 ಅನುಪಾತ ಹಂಚಿಕೆಯಲ್ಲಿಯೇ ರಾಜ್ಯ ಸರ್ಕಾರ ಯೋಜನೆಯಲ್ಲಿ ಕೆಲ ಮಾರ್ಪಾಡು ಮಾಡಿ ನೀಡಿದಲ್ಲಿ ತಕ್ಷಣವೇ ಹಣ ಬಿಡುಗಡೆ ಮಾಡಲು ಕೇಂದ್ರ ನೀರಾವರಿ ಸಚಿವರು ಒಪ್ಪಿಗೆ ಸೂಚಿಸಿರುತ್ತಾರೆ. ಶೀಘ್ರ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗುವಂತೆ ಮಾಡಲು ನಿರಂತರವಾಗಿ ಪ್ರಾಮಾಣಿಕ ಯತ್ನ ಕೈಗೊಳ್ಳಲಾಗುತ್ತಿದೆ. ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗುವುದು ವಿಳಂಬವಾದಲ್ಲಿ, ಕೇಂದ್ರದ ಅನುದಾನ ಪಡೆಯಲು ಇರುವ ತೊಡಕನ್ನು ನಿವಾರಿಸಲು ಕೇಂದ್ರದ ಪಾಲಿನ ಶೇ. 60 ಹಾಗೂ ರಾಜ್ಯದ ಪಾಲಿನ ಶೇ. 40 ರ ಅನುಪಾತದಡಿ ಖರ್ಚು ಭರಿಸುವ ರೀತಿಯಲ್ಲಿಯೇ ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಆಕ್ಸಿಲರಿ ಇರಿಗೇಷನ್ ಬೆನಿಫಿಟೆಡ್ ಪ್ರೋಗ್ರಾಂ ನಡಿ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರವನ್ನು ಕೋರುವ ನಿಟ್ಟಿನಲ್ಲಿ, ರಾಜ್ಯದ ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿ, ವಿಶ್ವೇಶ್ವರಯ್ಯ ಜಲ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಒಳಗೊಂಡ ತಾಂತ್ರಿಕ ಅಧಿಕಾರಿಗಳ ಸಭೆ ಮಾಡಿ, ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಎ. ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಕುರಿತು ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಶಾಸಕರು, ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ಕೈಗೊಂಡು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಎ. ನಾರಾಯಣಸ್ವಾಮಿ ಅವರು ಹೇಳಿದರು.
ಯೋಜನೆ ಹಾಗೂ ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳ ಕುರಿತು ಖುದ್ದು ತಾವು ಶಾಸಕರುಗಳೊಂದಿಗೆ ತೆರಳಿ, ಪ್ರಗತಿ ಕಾರ್ಯದ ಪರಿಶೀಲನೆ ಮಾಡಲಾಗಿದೆ. ಅಲ್ಲದೆ ಸಂಬಂಧಪಟ್ಟ ಶಾಸಕರುಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಯೋಜನೆಯ ಜಾರಿಯಲ್ಲಿರುವ ತೊಡಕುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಅಬ್ಬಿನಹೊಳಲು ಗ್ರಾಮದ ಬಳಿಯ ರೈತರು ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿರುವುದು ಹಾಗೂ ಮುತ್ತಿನಕೊಪ್ಪ ಬಳಿಯ ಸಮಸ್ಯೆ ಹಾಗೂ 11 ಟವರ್ ಗಳನ್ನು ನಿರ್ಮಿಸಲು ಕೇಂದ್ರ ಪರಿಸರ ಇಲಾಖೆಯ ಆಕ್ಷೇಪಣೆ ಬಗ್ಗೆಯೂ ಮಾಹಿತಿ ಪಡೆದಿದ್ದು, ತೊಡಕುಗಳ ನಿವಾರಣೆ ನಿಟ್ಟಿನಲ್ಲಿ ಈಗಾಗಲೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ, ಆದಷ್ಟು ತ್ವರಿತವಾಗಿ ಯೋಜನೆಯನ್ನು ಪೂರ್ಣಗೊಳಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಅಭಿಯಂತರ ಶಿವಪ್ರಕಾಶ್ ಅವರು ಮಾತನಾಡಿ, ಯೋಜನೆಯ ಪ್ಯಾಕೇಜ್ 01 ರಲ್ಲಿ ಪಂಪ್ ಹೌಸ್-01 ರ ಕಾಮಗಾರಿ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ, ಪಂಪ್ ಹೌಸ್-02 ರ ಸ್ಟ್ರಕ್ಚರ್ ಕೆಲಸ ಇನ್ನೂ ನಡೆಯುತ್ತಿದೆ. ಯೋಜನೆಯಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17. 4 ಟಿ.ಎಂ.ಸಿ ನೀರನ್ನು ಜೂನ್ 15 ರಿಂದ ಅಕ್ಟೋಬರ್ 15 ರವರೆಗೆ ಮಾತ್ರ ಲಿಫ್ಟ್ ಮಾಡಲು ಅವಕಾಶವಿದೆ. ಚಿತ್ರದುರ್ಗ ಶಾಖಾ ಕಾಲುವೆ ಪ್ಯಾಕೇಜ್ 01 ರಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎ. ನಾರಾಯಣಸ್ವಾಮಿ ಅವರು, ಎರಡೂ ಪಂಪ್ ಹೌಸ್‍ಗಳ ಕಾಮಗಾರಿಗಳನ್ನು ಜನವರಿ ಒಳಗಾಗಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಸೇರಿದಂತೆ ಭದ್ರಾ ಮೇಲ್ದಂಡೆ ಯೋಜನೆಯ ವಿವಿಧ ವಿಭಾಗಗಳ ಅಭಿಯಂತರರು, ಭೂಸ್ವಾಧೀನ ಅಧಿಕಾರಿಗಳು ಉಪಸ್ಥಿತರಿದ್ದರು..