ಮಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗಲಿದೆ ಎಂಬ ಭರವಸೆ ಹುಸಿಯಾಗಿದೆ. ಉಭಯ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ.
ಮಂಗಳೂರು ಕ್ಷೇತ್ರದಿಂದ ಯು.ಟಿ. ಖಾದರ್ ಮತ್ತು ಪುತ್ತೂರಿನಿಂದ ಅಶೋಕ ಕುಮಾರ್ ರೈ ಗೆದ್ದಿದ್ದು, ಸತತ ಐದು ಬಾರಿ ಗೆಲುವು ಸಾಧಿಸಿರುವ ಯು.ಟಿ. ಖಾದರ್ ಸಚಿವರಾಗುವುದು ಖಚಿತ ಎಂದೇ ಹೇಳಲಾಗುತ್ತಿತ್ತು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಸದಸ್ಯರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಹರೀಶ್ ಕುಮಾರ್ ಅವರ ಹೆಸರು ಸಹ ಸಚಿವ ಸ್ಥಾನಕ್ಕೆ ಕೇಳಿ ಬಂದಿದ್ದವು. ಯು.ಟಿ. ಖಾದರ್ ಅವರನ್ನು ವಿಧಾನಸಭೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇನ್ನು ಮಂಜುನಾಥ ಭಂಡಾರಿ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದೇ ಸ್ಥಳೀಯ ಕಾಂಗ್ರೆಸ್ಸಿಗರು ನಂಬಿದ್ದರು. ‘ನಾನಾಗಿ ಸಚಿವ ಸ್ಥಾನ ಕೇಳುವುದಿಲ್ಲ. ಆದರೆ, ಪಕ್ಷದ ವರಿಷ್ಠರು ಸಚಿವ ಸ್ಥಾನ ನೀಡಲು ನಿರ್ಧರಿಸಿದರೆ, ಶಿರಸಾವಹಿಸಿ ಆ ಜವಾಬ್ದಾರಿ ನಿಭಾಯಿಸಲು ಸಿದ್ಧ’ ಎಂದು ಹರೀಶ್ ಕುಮಾರ್ ಆರಂಭದಲ್ಲಿ ಹೇಳಿದ್ದರು. ಆ ನಂತರ, ‘ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿಲ್ಲ.
ಜವಾಹರ್‌ಲಾಲ್ ನೆಹರೂ ಪುಣ್ಯತಿಥಿ: ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಗಣ್ಯರಿಂದ ನಮನ
ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ’ ಎಂದು ಅವರು ಹೇಳಿದ್ದರು. ‘ಪಕ್ಷವು ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧ. ಇದಕ್ಕಾಗಿ ದುಂಬಾಲು ಬೀಳುವುದಿಲ್ಲ’ ಎಂದೇ ಹೇಳುತ್ತಿದ್ದ ಮಂಜುನಾಥ ಭಂಡಾರಿ ಸಂಪುಟ ಸೇರಲು ಸಾಕಷ್ಟು ಕಸರತ್ತನ್ನೂ ನಡೆಸಿದ್ದರು. ಉಡುಪಿ ಜಿಲ್ಲೆಯ ಕೋಟಾದಲ್ಲಿ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರವೂ ಸ್ಥಳೀಯ ಕಾಂಗ್ರೆಸ್ಸಿಗರಲ್ಲಿ ಇತ್ತು. ಆದರೆ, ಈ ಇಬ್ಬರೂ ವಿಧಾನ ಪರಿಷತ್ ಸದಸ್ಯರಿಗೆ ಮುಖ್ಯಮಂತ್ರಿ ಮಣೆ ಹಾಕಿಲ್ಲ. ರಾಜ್ಯ ಸಂಪುಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾಗುವುದು ಖಚಿತವಾಗಿದೆ.