Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ.. ಮನೆಗಳಿಗೆ ಬೆಂಕಿ, ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಲೂಟಿ….!

0

ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾನುವಾರ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇಂಫಾಲ ಪೂರ್ವ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಹೊಸದಾಗಿ ಐದು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ಭದ್ರತಾ ಪಡೆಗಳ ಸಿಬ್ಬಂದಿ ನಡುವೆ ಘರ್ಷಣೆ ಕೂಡ ಭುಗಿಲೆದ್ದಿದೆ.

ಮೇ 3ರಿಂದ ಮಣಿಪುರ ರಾಜ್ಯಾದ್ಯಂತ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ. ಆಗಸ್ಟ್ 29ರಂದು ರಾಜ್ಯ ವಿಧಾನಸಭೆಯ ಅಧಿವೇಶನ ಕರೆಯಲಾಗಿದೆ. ಇದರ ನಡುವೆ ಇಂಫಾಲ ಪೂರ್ವ ಜಿಲ್ಲೆಯ ನ್ಯೂ ಲಂಬುಲೇನ್‌ ಪ್ರದೇಶದಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಇಡೀ ಪ್ರದೇಶದಲ್ಲಿ ಬಿಗಿ ಭದ್ರತೆಯೊಂದಿಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಆದರೂ, ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದ್ದು, ಸ್ಥಳೀಯ ಜನರಲ್ಲಿ ಅನುಮಾನಗಳನ್ನು ಹುಟ್ಟುಹಾಕಿದೆ. ಬೆಂಕಿ ಹಚ್ಚಿದ ದುಷ್ಕರ್ಮಿಗಳು ಸ್ಥಳೀಯ ನಿವಾಸಿಗಳೇ ಆಗಿರಬಹುದು ಎಂದು ಅನೇಕರು ಶಂಕಿಸಿದ್ದಾರೆ.

ನ್ಯೂ ಲಂಬುಲೇನ್ ಪ್ರದೇಶದಲ್ಲಿ ವಿವಿಧ ಸಮುದಾಯಗಳ ಜನರು ವಾಸವಾಗಿದ್ದಾರೆ. ಹೀಗಾಗಿ ಇಲ್ಲಿ ಹಿಂಸಾಚಾರ ಪರಿಸ್ಥಿತಿಯನ್ನು ಹತೋಟಿಗೆ ತರಲು ಹಾಗೂ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ 24 ಗಂಟೆಯೂ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್​) ಸಿಬ್ಬಂದಿಯನ್ನು ಗಮನಾರ್ಹ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ, ವಿಶೇಷ ಸೇವಾ ಬೆಟಾಲಿಯನ್ (ಎಸ್‌ಎಸ್‌ಬಿ) ಸಿಬ್ಬಂದಿಯನ್ನು ಮುಖ್ಯ ರಸ್ತೆಯಲ್ಲಿ ನಿಯೋಜಿಸಲಾಗಿದೆ. ಇಡೀ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಇದರ ಮಧ್ಯೆಯೂ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಖಂಡಿಸಿ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ.

ಇಂಫಾಲ ನಗರದ ಶಾಂತಿಯುತ ವಾತಾವರಣವನ್ನು ಅಸ್ಥಿರಗೊಳಿಸಲು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಪೊಲೀಸರು ಮಧ್ಯಪ್ರವೇಶಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಅಲ್ಲದೇ, ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಇದು ಭದ್ರತಾ ಸಿಬ್ಬಂದಿ ಮತ್ತು ಕುಪಿತ ಪ್ರತಿಭಟನಾಕಾರರ ನಡುವೆ ಘರ್ಷಣೆಗೆ ಕಾರಣವಾಗಿದೆ.

ಮತ್ತೊಂದೆಡೆ, ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಇಲಾಖೆಯ ಮಾಜಿ ನಿರ್ದೇಶಕ ಕೆ. ರಾಜೋ ಎಂಬುವರ ನಿವಾಸದಲ್ಲಿ ಕಾವಲು ಕಾಯುತ್ತಿದ್ದ ಭದ್ರತಾ ಸಿಬ್ಬಂದಿಯ ಮೂರು ಶಸ್ತ್ರಾಸ್ತ್ರಗಳನ್ನು ಅಪರಿಚಿತ ದುಷ್ಕರ್ಮಿಗಳು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಫಾಲ ಪಶ್ಚಿಮ ಜಿಲ್ಲೆಯ ಸಗೋಲ್‌ಬಂದ್ ಬಿಜೋಯ್ ಗೋವಿಂದ್ ಎಂಬಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಲೂಟಿ ಮಾಡಿದ ಶಸ್ತ್ರಾಸ್ತ್ರಗಳಲ್ಲಿ ಎರಡು ಎಕೆ ಸಿರೀಸ್ ರೈಫಲ್‌ಗಳು ಮತ್ತು ಕಾರ್ಬೈನ್ ಸೇರಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.