ಮಣಿಪುರದಲ್ಲಿ ಭುಗಿಲೆದ್ದಿರುವ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಕಲಹದಲ್ಲಿ, “253 ಚರ್ಚ್‌ಗಳನ್ನು ಸುಟ್ಟು ಹಾಕಲಾಗಿದೆ” ಎಂದು ಚುರಾಚಂದ್‌ಪುರ ಜಿಲ್ಲೆಯ ಬುಡಕಟ್ಟುಗಳ ಒಕ್ಕೂಟವಾದ ‘ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ’ (ಐಟಿಎಲ್‌ಎಫ್) ಆರೋಪಿಸಿದೆ. ಇಂಫಾಲ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಚುರಾಚಂದ್‌ಪುರಕ್ಕೆ ಸೋಮವಾರ ಭೇಟಿ ನೀಡಿದ್ದ ರಾಜ್ಯಪಾಲ ಅನುಸೂಯಾ ಉಯಿಕೆ ಅವರಿಗೆ ಸಲ್ಲಿಸಿದ ಜ್ಞಾಪಕ ಪತ್ರದಲ್ಲಿ ಐಟಿಎಲ್‌ಎಫ್ ಈ ಆರೋಪಗಳನ್ನು ಮಾಡಿದೆ.
ಐಟಿಎಲ್‌ಎಫ್ ಅಧ್ಯಕ್ಷ ಪಗಿನ್ ಹಾಕಿಪ್, ಕಾರ್ಯದರ್ಶಿ ಮುವಾನ್ ಟಾಂಬಿಂಗ್ ನೀಡಿದ ಜ್ಞಾಪಕ ಪತ್ರದಲ್ಲಿ, “253 ಚರ್ಚ್‌ಗಳನ್ನು ಸುಟ್ಟುಹಾಕಲಾಯಿತು. ನಮ್ಮ ಸಾವಿರಾರು ಜನರು ದೇಶದ ವಿವಿಧ ಸ್ಥಳಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ” ಎಂದು ನೋವು ತೋಡಿಕೊಳ್ಳಲಾಗಿದೆ.
ಸತ್ತವರ ಪಟ್ಟಿ, ಹಿಂಸಾಚಾರ ಭುಗಿಲೆದ್ದ ಬಳಿಕ ನಾಶವಾದ ಚರ್ಚ್‌ಗಳು, ಆಡಳಿತಾತ್ಮಕ ಕಟ್ಟಡಗಳು, ಸುಟ್ಟುಹೋದ ಹಳ್ಳಿಗಳ ವಿವರಗಳನ್ನು ಜ್ಞಾಪಕ ಪತ್ರದೊಂದಿಗೆ ಐಟಿಎಲ್‌ಎಫ್ ಲಗತ್ತಿಸಿದೆ. ನಿರಾಶ್ರಿತ ಶಿಬಿರಗಳ ವಿವರದೊಂದಿಗೆ, ಅರಾಂಬೈ ಟೆಂಗೋಲ್ ಸಂಘಟನೆ ಜೊತೆಯಲ್ಲಿ ರಾಜ್ಯ ನಾಯಕರು ಪಾಲ್ಗೊಂಡಿರುವುದನ್ನು ದೃಢೀಕರಿಸುವ ಫೋಟೋಗಳನ್ನೂ ಐಟಿಎಲ್‌ಎಫ್ ಒದಗಿಸಿದೆ.
ಅರಾಂಬೈ ತೆಂಗೋಲ್ ಎಂಬುದು ಮೇತೇಯಿ ಸಂಘಟನೆಯಾಗಿದ್ದು, ಕುಕಿಗಳು ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ. ಹಾನಿಗೊಳಗಾದ ಚರ್ಚ್ ಆಸ್ತಿಗಳ ಬಗ್ಗೆ ಕೇಳಿದಾಗ, ಐಟಿಎಲ್‌ಎಫ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಗಿಂಜಾ ವುಲ್ಜಾಂಗ್ ಪ್ರತಿಕ್ರಿಯಿಸಿ, “ಮುಖ್ಯವಾಗಿ ಇಂಫಾಲ್ ಕಣಿವೆ, ಗುಡ್ಡಗಾಡು ಪ್ರದೇಶಗಳಲ್ಲಿ ಚರ್ಚ್‌ಗಳ ಜೊತೆಗೆ 93 ಚರ್ಚ್ ಆಡಳಿತ ಕಟ್ಟಡಗಳು ಮತ್ತು ಕ್ವಾರ್ಟರ್‌ಗಳನ್ನು ಸುಟ್ಟುಹಾಕಲಾಗಿದೆ” ಎಂದು ತಿಳಿಸಿದ್ದಾರೆ.
ಇಂಫಾಲ್ ಕಣಿವೆಯ ಆರು ಜಿಲ್ಲೆಗಳಲ್ಲಿ ಮೈತೇಯಿ ಪ್ರಾಬಲ್ಯವಿದೆ. 10 ಗುಡ್ಡಗಾಡು ಜಿಲ್ಲೆಗಳಲ್ಲಿ ಬುಡಕಟ್ಟು ಜನರನ್ನು ಹೆಚ್ಚಿದ್ದಾರೆ. ನಾಗಾಗಳು ಮತ್ತು ಕುಕಿಗಳು ಗುಡ್ಡಗಾಡು ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ.
ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಆಫ್ ನಾರ್ತ್ ಈಸ್ಟ್ ಇಂಡಿಯಾದ ಸದಸ್ಯ ಅಲೆನ್ ಬ್ರೂಕ್ಸ್ ಅವರು ‘ದಿ ಟೆಲಿಗ್ರಾಫ್’ಗೆ ಪ್ರತಿಕ್ರಿಯಿಸಿ, “ಹಿಂಸಾಚಾರವು ಬಹಳ ದೊಡ್ಡ ಮಟ್ಟದಲ್ಲಿದೆ ಮತ್ತು ಅತ್ಯಂತ ದುರಂತಮಯವಾಗಿದೆ. ಹಿಂಸಾಚಾರ ಅಂಕಿ-ಅಂಶಗಳು ನಿಜವೆಂದು ನಾವು ನಂಬುತ್ತೇವೆ. ಏಕೆಂದರೆ ಇವುಗಳನ್ನು ಇಲ್ಲಿನ ಸ್ಥಳೀಯ ಸಂಸ್ಥೆಗಳು ರುಜುವಾತುಪಡಿಸಿವೆ. ಆದರೆ ಪ್ರಶ್ನೆ ಇರುವುದು ಒಂದು ಚರ್ಚ್ ಅನ್ನು ಸುಡುವುದು ಅಥವಾ 1,000 ಚರ್ಚ್‌ಗಳನ್ನು ಸುಡುವುದರ ಬಗ್ಗೆ ಅಲ್ಲ. ಜನರ ಸುರಕ್ಷತೆ ಮತ್ತು ದೇಶದ ಜಾತ್ಯತೀತತೆ ಅಪಾಯದಲ್ಲಿದೆ” ಎಂದು ವಿಷಾದಿಸಿದ್ದಾರೆ.