ನವದೆಹಲಿ: ಜನನ ಹಾಗೂ ಮರಣಕ್ಕೆ ಸಂಬಂಧಿಸಿದ ದತ್ತಾಂಶವನ್ನು ಮತದಾರರ ಪಟ್ಟಿಗೆ ಜೋಡಿಸಲು ಸಂಸತ್ತಿನಲ್ಲಿ ಮಸೂದೆಯನ್ನು ತರಲು ಸರ್ಕಾರ ಯೋಜಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಸೋಮವಾರ ಭಾರತೀಯ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತರ ಕಚೇರಿ ಉದ್ಘಾಟಿಸಿದ ಶಾ ಬಳಿಕ ಮಾತನಾಡಿ, ವ್ಯಕ್ತಿಯ ಜನನ ಹಾಗೂ ಮರಣದ ನೋಂದಣಿಯನ್ನು ಮತದಾರರ ಪಟ್ಟಿಯೊಂದಿಗೆ ಜೋಡಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಈ ಪ್ರಕ್ರಿಯೆಯ ಅಡಿಯಲ್ಲಿ ಒಬ್ಬ ವ್ಯಕ್ತಿಗೆ 18 ವಯಸ್ಸು ತುಂಬಿದಾಗ ಆತನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿ ಸತ್ತಾಗ ಆ ಮಾಹಿತಿ ಸ್ವಯಂಚಾಲಿತವಾಗಿ ಚುನಾವಣಾ ಆಯೋಗಕ್ಕೂ ಹೋಗಲಿದ್ದು, ಆತನ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗುತ್ತದೆ ಎಂದು ತಿಳಿಸಿದರು.
ಜನನ ಮತ್ತು ಮರಣ ನೋಂದಣಿ ಕಾಯಿದೆ, 1969 ರ ತಿದ್ದುಪಡಿ ಮಸೂದೆಯು ಡ್ರೈವಿಂಗ್ ಲೈಸೆನ್ಸ್ ಮತ್ತು ಪಾಸ್‌ಪೋರ್ಟ್‌ಗಳನ್ನು ವಿತರಿಸಲು ಹಾಗೂ ಇತರ ಜನರಿಗೆ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ನೀಡಲು ಸಂಬಂಧಿಸಿದ ವಿಷಯಗಳನ್ನು ಸಹ ಸುಗಮಗೊಳಿಸುತ್ತದೆ ಎಂದಿದ್ದಾರೆ.