ಚಿತ್ರದುರ್ಗ: ಪ್ರಸ್ತುತ ಸಮಾಜದಲ್ಲಿ ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಮಕ್ಕಳು, ಯುವತಿಯರು ಹಾಗೂ ಹೆಣ್ಣು ಮಕ್ಕಳನ್ನು ಬಲಿಪಶು ಮಾಡಿ, ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಮನಗೂಳಿ ಪ್ರೇಮಾವತಿ ಎಂ ಕಳವಳ ವ್ಯಕ್ತ ಪಡಿಸಿದರು.
ಜಿಲ್ಲಾ ಕಾನೂನೂ ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಆರೋಗ್ಯ, ಶಿಕ್ಷಣ ಹಾಗೂ ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ, ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಾನವ ಕಳ್ಳ ಸಾಗಣಿಕೆ ತಡೆ ಕುರಿತಾದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಸಿನಿಮಾಗಳಲ್ಲಿ ವಜ್ರ, ಚಿನ್ನವನ್ನು ಕಳ್ಳಸಾಗಣಿಕೆ ಮಾಡುವುದು, ಪೊಲೀಸರು ಅವರನ್ನು ಹಿಡಿದು ಮಟ್ಟ ಹಾಕುವುದನ್ನು ನೋಡುತ್ತಿದ್ದವು. ಆದರೆ ಇಂದು ಮಾನವ ಕಳ್ಳ ಸಾಗಾಣಿಕೆ ಗಂಭೀರ ವಿಷಯವಾಗಿದೆ. ಮಕ್ಕಳನ್ನು ಅಪಹರಿಸಿ ಅಪರಾಧ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. 18 ವರ್ಷದ ಒಳಗಾಗಿರುವ ಯುವತಿಯರಿಗೆ ಆಮಿಷವೊಡ್ಡಿ, ಅಕ್ರಮ ಚಟುವಟಿಕೆಗಳಿಗೆ ತಳ್ಳುವ ಸಂಭವ ಇದೆ. ಮಾನವ ಕಳ್ಳ ಸಾಗಾಣಿಕೆ ಮೂಲಕ ಸಣ್ಣ ಮಕ್ಕಳನ್ನು ಭಿಕ್ಷಾಟನೆಗೆ, ಅಂಗಾಗಗಳ ಮಾರಾಟದ ಜಾಲಗಳಿಗೆ ತಳ್ಳಾಗುತ್ತಿದೆ ಎಂದು ಹೇಳಿದರು.
ಮಾನವ ಕಳ್ಳ ಸಾಗಾಣಿಕೆ ತಡೆಯ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಸುತ್ತಿರುವ ಪ್ರತಿಯೊಬ್ಬರು ಜಾಗರೂಕರಾಗಿದ್ದು, ಈ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಚಿಸಿರುವ ಹಲವು ಕಾನೂನು ಹಾಗೂ ಕಾಯ್ದೆಗಳನ್ನು ಬಳಸಿ ಮಾನವ ಕಳ್ಳ ಸಾಗಾಣಿಕೆಗೆ ತುತ್ತಾದವರ ಹಕ್ಕುಗಳನ್ನು ರಕ್ಷಿಸಿ, ಸೂಕ್ತ ನೆರವು ನೀಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ವಿಶ್ವ ಸಂಸ್ಥೆ ಲೈಂಗಿಕ, ಕಾರ್ಮಿಕ ದೌರ್ಜನ್ಯ ಹಾಗೂ ಅಂಗಾಗಳ ಮಾರಾಟದ ಅಪರಾಧಗಳಿಗೆ ಮಾನವ ಕಳ್ಳ ಸಾಗಾಣಿಕಯೇ ಮೂಲ ಕಾರಣ ಎಂದು ವರದಿಯಲ್ಲಿ ತಿಳಿಸಿದೆ. ಚಿಕಿತ್ಸೆ ನೀಡುವುದಕ್ಕಿಂತ ರೋಗ ಬರದಂತೆ ತಡೆಯುವುದೇ ಉತ್ತಮ ಮಾರ್ಗವಾಗಿದೆ. ಇದರಂತೆ ಮಾನವ ಕಳ್ಳ ಸಾಗಣಿಕೆ ನಡೆಯದಂತೆ ಜಾಗೃತಿ ವಹಿದ್ದು, ಜಿಲ್ಲಾ ಮಟ್ಟದ ಕಾರ್ಯಪಡೆಯ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಯಾವುದೇ ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ದಾಖಲಾಗದಿರುವುದು ಉತ್ತಮ ಅಂಶವಾಗಿದೆ ಎಂದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಅತಿ ದೊಡ್ಡ ಸವಾಲು ಆಗಿದೆ. ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ 27,000 ಮಕ್ಕಳು ಕಾಣೆಯಾದ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಕರ್ನಾಟಕ ರಾಜ್ಯ 3ನೇ ಸ್ಥಾನದಲ್ಲಿರುವುದು, ನಮ್ಮಲ್ಲರನ್ನು ಆಘಾತಕ್ಕೆ ಈಡು ಮಾಡಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ತಿಪಟೂರಿನ ಕೊಬ್ಬರಿ ಕಾರ್ಖಾನೆಗಳಲ್ಲಿ ಮಕ್ಕಳನ್ನು ದುಡಿತಕ್ಕೆ ಇಟ್ಟುಕೊಂಡ ಕುರಿತು ವರದಿಗಳು ಪ್ರಕಟವಾಗಿದ್ದವು. ಇದನ್ನು ಆದರಿಸಿ, ಆಯೋಗ ಕೊಬ್ಬರಿ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ 68 ಮಕ್ಕಳನ್ನು ರಕ್ಷಿಸಿ, ಮಕ್ಕಳ ರಕ್ಷಣಾ ಘಟಕ್ಕೆ ನೀಡಲಾಗಿದೆ. ಬೇರೆ ರಾಜ್ಯಗಳಿಂದ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಹೆಣ್ಣುಮಕ್ಕಳು ಸಹ ಬಂದಿದ್ದಾರೆ. ಇವರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡಿದೆ, ಕನಿಷ್ಠ ವೇತನವನ್ನು ಸಹ ಕೊಡದೆ ದುಡಿಕೊಳ್ಳಲಾಗುತ್ತಿದೆ. ಈ ಅಂಶಗಳನ್ನು ಗಮನಿಸಿ, ಮಾನವ ಹಕ್ಕು ಹಾಗೂ ಮಹಿಳಾ ಆಯೋಗಗಳು ಪ್ರಕರಣ ದಾಖಲಿಸುವಂತೆ ತಿಳಿಸಲಾಯಿತು. ಮಾನವ ಕಳ್ಳ ಸಾಗಾಣಿಕೆ ತಡೆಯಲು ಗ್ರಾಮ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿಗಳನ್ನು ಸ್ಥಾಪಿಸಲಾಗಿದೆ. ಆದರೆ ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಇಲ್ಲ. ಈ ಕಾವಲು ಸಮಿತಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ಸಭೆ ನಡೆಸಿ, ನಡಾವಳಿಗಳನ್ನು ದಾಖಲಿಸಬೇಕು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ್, ಇತಿಹಾಸದ ಉದ್ದಕ್ಕೂ ಬೇರೆ ಬೇರೆ ಕಾರಣಗಳಿಗೆ ದೌರ್ಜನ್ಯ ನಡೆದ ಘಟನೆಗಳು ಇವೆ. ಪ್ರಸ್ತುತ ಮಾನವ ಕಳ್ಳ ಸಾಗಾಣಿಕೆ ರೂಪದಲ್ಲಿ ಈ ದೌರ್ಜನ್ಯ ಮುಂದುವರೆದಿದ್ದು, ಮಕ್ಕಳು ಹಾಗೂ ಮಹಿಳೆಯರ ಬಲಿ ಪಶು ಆಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಇದನ್ನು ತಡೆಗಟ್ಟಲು ಜಿಲ್ಲಾ ಮಟ್ಟದ ಕಾರ್ಯಪಡೆಗಳ ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರ ನೀಡಬೇಕು. ಆಗ ಮಾತ್ರ ಇದನ್ನು ತಡೆಗಟ್ಟಲು ಯಶಸ್ವಿಯಾಗಲಿದ್ದೇವೆ ಎಂದರು.
ಕಾರ್ಯಗಾರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕ ಬಾಲಚಂದ್ರ ನಾಯ್ಕ್ ಉಪನ್ಯಾಸ ನೀಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಆರ್.ಪ್ರಭಾಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ.ಸಿ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.