ಬೆಂಗಳೂರು: ತಡವಾಗಿ ಬಂದರು ಎಂಬ ಕಾರಣಕ್ಕಾಗಿ ರಾಜ್ಯಪಾಲ ತಾವರ್‍ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ತೆರಳಿದ್ದ ಏರ್ ಏಷ್ಯಾ ವಿಮಾನ ಸಂಸ್ಥೆಯ ಸ್ಟೇಷನ್ ಮ್ಯಾನೇಜರ್ ಸೇರಿದಂತೆ ಮೂವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ರಾಜ್ಯಪಾಲರನ್ನು ಬಿಟ್ಟು ತೆರಳಿದ್ದ ಹಿನ್ನೆಲೆಯಲ್ಲಿ ಸಂಸ್ಥೆ ವಿರುದ್ಧ ರಾಜಭವನ ದೂರು ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಏರ್‍ಏಷ್ಯಾ ಸಂಸ್ಥೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದ ಸ್ಟೇಷನ್ ಮ್ಯಾನೇಜರ್ ಹಾಗೂ ಇತರೆ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಏರ್ ಏಷ್ಯಾ ಸಂಸ್ಥೆಯು ಇದು ನಮ್ಮಿಂದ ಉಂಟಾಗಿರುವ ಅಚಾತುರ್ಯ. ರಾಜ್ಯಪಾಲರು ಅತೀ ಗಣ್ಯ ವ್ಯಕ್ತಿಗಳ ಸಾಲಿಗೆ ಸೇರುತ್ತಾರೆ. ಈ ಘಟನೆಯಿಂದ ನಮಗೆ ಮುಜುಗರವಾಗಿದೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುವುದಾಗಿ ಸಂಸ್ಥೆ ಹೇಳಿದೆ.
ಘಟನೆ ಕುರಿತಂತೆ ಏರ್‍ಏಷ್ಯಾ ಸಂಸ್ಥೆಯು ಸಿಇಒ ಒಂದೆರೆಡು ದಿನದಲ್ಲಿ ರಾಜಭವನಕ್ಕೆ ಆಗಮಿಸಿ ಖುದ್ದು ರಾಜ್ಯಪಾಲರನ್ನು ಭೇಟಿಯಾಗಿ ವಿಷಾದ ವ್ಯಕ್ತಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ನಾವು ರಾಜ್ಯಪಾಲರ ಕಚೇರಿ ಜೊತೆ ಸಂಪರ್ಕ ಸಾಸಿದ್ದೇವೆ. ನಮ್ಮ ಸಿಬ್ಬಂದಿಗಳಿಂದ ಉಂಟಾಗಿರುವ ಕಹಿಘಟನೆಗೆ ವಿಷಾದಿಸುತ್ತೇವೆ. ಮೂವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ರಾಜ್ಯಪಾಲರನ್ನು ಭೇಟಿಯಾಗಿ ಮನವರಿಕೆ ಮಾಡುವುದಾಗಿ ಸಂಸ್ಥೆಯ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.