Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಅಗಸ್ಟ್‌ 7 ರಂದು ಪ್ರತಿಭಟನೆ: ಈರಣ್ಣ ಕಡಾಡಿ

0

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಆಗಸ್ಟ್ 7 ರಂದು  ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಆಡಳಿತರೂಢ ಕಾಂಗ್ರೆಸ್ ಸರ್ಕಾರವೂ ಬಿಜೆಪಿ ಸರ್ಕಾರ ತಂದಿದ್ದ ರೈತ ಪರ ಯೋಜನೆಗಳನ್ನು ಕೈ ಬಿಟ್ಟಿದ್ದು, ರಾಜ್ಯದ ಅನ್ನದಾತರ ವಿರುದ್ಧವಾಗಿ ನಡೆದುಕೊಂಡಿದೆ. ರೈತ ವಿರೋಧಿ ನೀತಿಯನ್ನು ಖಂಡಿಸಿ ಸೋಮವಾರ ವಿವಿಧ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಎಪಿಎಂಸಿ ಕಾಯ್ದೆ ಮುಖಾಂತರ ಬಿಜೆಪಿ ಸರ್ಕಾರ ಕೊಟ್ಟಿತ್ತು. ಇದರಿಂದ ರೈತರಿಗೆ ಸಾಗಾಣಿಕೆ ವೆಚ್ಚ, ದಲ್ಲಾಳಿಗಳ ಕಮಿಷನ್ ಮತ್ತು ಇತರೆ ಖರ್ಚುಗಳು ಉಳಿತಾಯವಾಗುತ್ತಿತ್ತು. ಇದೀಗ ಕಾಂಗ್ರೆಸ್ ಸರ್ಕಾರವು ಎಪಿಎಂಸಿ ಕಾನೂನನ್ನು ರದ್ದು ಮಾಡಿ ರೈತರ ಆದಾಯಕ್ಕೆ ಕುತ್ತು ತಂದಿದೆ ಎಂದು ಟೀಕಿಸಿದ್ದಾರೆ.

ಅವೈಜ್ಞಾನಿಕ ವಿದ್ಯುತ್ ದರ ಏರಿಕೆ : ವಿದ್ಯುತ್ ದರ ಏರಿಕೆ ಮಾಡಿ ಖರ್ಚನ್ನು ಹೆಚ್ಚು ಮಾಡಲಾಗಿದೆ. ಇದರಿಂದ ರೈತರು ಅವಲಂಬಿತವಾಗಿರುವ ಹತ್ತಿ ಉದ್ಯಮ, ರೈಸ್ ಮಿಲ್ ಮತ್ತು ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಬಾರಿ ತೊಂದರೆ ಆಗಿದೆ ಎಂದಿದ್ದಾರೆ. ಜೊತೆಗೆ, ರೈತರ ಮಕ್ಕಳು ವಿದ್ಯಾವಂತರಾಗಬೇಕು, ಉನ್ನತ ಶಿಕ್ಷಣವನ್ನು ಪಡೆಯಬೇಕು ಎನ್ನುವ ಹಿತದೃಷ್ಟಿಯಿಂದ ರಾಜ್ಯದ 11 ಲಕ್ಷ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 438.69 ಕೋಟಿ ರೂ.ಗಳ ರೈತ ವಿದ್ಯಾನಿಧಿಯನ್ನು ರದ್ದುಪಡಿಸುವ ಮೂಲಕ ಬಡ ರೈತರ ಮಕ್ಕಳಿಗೆ ಅನ್ಯಾಯವೆಸಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ 50 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ಭೂ ಸಿರಿ ಎಂಬ ಯೋಜನೆಯಲ್ಲಿ 10 ಸಾವಿರ ಹೆಚ್ಚುವರಿ ಸಹಾಯಧನ ನೀಡುವ ಹಿಂದಿನ ಸರ್ಕಾರ ನಿರ್ಣಯವನ್ನು ರದ್ದು ಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಜೊತೆ ಬಿಜೆಪಿ ರಾಜ್ಯ ಸರ್ಕಾರ ಕೂಡ ಸುಮಾರು 51 ಲಕ್ಷ ರೈತರಿಗೆ ವಾರ್ಷಿಕ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ಕಿಸಾನ್ ಸಮ್ಮಾನ್ ನಿಧಿಯೋಜನೆ ಜಾರಿಗೆ ತಂದಿದ್ದನ್ನು ತಡೆ ಹಿಡಿಯುತ್ತಿದೆ ಎಂದು ದೂರಿದ್ದಾರೆ.

ಈ ಹಿಂದೆ ಕೃಷಿ ಭೂಮಿ ಕೊಳ್ಳುವವರು ಕೃಷಿಕರಾಗಿರಬೇಕು ಅಥವಾ ಕೃಷಿ ಕೂಲಿಕಾರನಾಗಿರಬೇಕು ಎಂಬ ನಿಯಮ ಇತ್ತು. ಹೀಗಾಗಿ, ರೈತರ ಜಮೀನುಗಳಿಗೆ ಯೋಗ್ಯದರ ಸಿಗುತ್ತಿರಲಿಲ್ಲ. ಇದಕ್ಕೆ ಬಿಜೆಪಿ ಸರ್ಕಾರ ಕೃಷಿ ಭೂಮಿ ಮಾರಾಟ ಕಾಯ್ದೆಯನ್ನು ತಂದಿತ್ತು. ಈ ಕಾಯ್ದೆಯಲ್ಲಿ ಯಾರು ಬೇಕಾದರೂ ಕೃಷಿ ಭೂಮಿಯನ್ನು ಕೊಂಡುಕೊಳ್ಳಬಹುದು ಎಂಬ ನಿಯಮವನ್ನು ಜಾರಿ ಮಾಡಲಾಯಿತು. ಇದರಿಂದ ಕೃಷಿ ಜಮೀನುಗಳ ಮೌಲ್ಯ ಹೆಚ್ಚಾಗಿತ್ತು ಮತ್ತು ಇದರಿಂದ ಕೃಷಿ ಪದವೀಧರ ವಿದ್ಯಾರ್ಥಿಗಳು ಕೂಡ ಜಮೀನನ್ನು ಖರೀದಿಸುವ ಮೂಲಕ ಹೊಸ ತಂತ್ರಜ್ಞಾನ ಮತ್ತು ಕೃಷಿ ಕಾರ್ಯಕ್ಕೆ ಹೊಸ ಆಯಾಮ ನೀಡಬಹುದು ಎಂದು ಬಿಜೆಪಿ ಸರ್ಕಾರ ಈ ಕಾಯ್ದೆಯನ್ನು ತಂದಿತ್ತು. ಆದರೆ, ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಕೃಷಿ ಭೂಮಿ ಮಾರಾಟ ಕಾಯ್ದೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀರಾವರಿ ಯೋಜನೆಗಳ ನಿರ್ಲಕ್ಷ್ಯ: ಬಿಜೆಪಿ ಸರ್ಕಾರ ನೀರಾವರಿ ಯೋಜನೆಗಳಿಗೆ 23 ಸಾವಿರ ಕೋಟಿ ಅನುದಾನ ಒದಗಿಸಿತ್ತು. ಅದನ್ನು ಈಗ 19 ಸಾವಿರ ಕೋಟಿಗೆ ಇಳಿಸಿ ರೈತರಿಗೆ ಅನ್ಯಾಯವೆಸಗಿದೆ. ಮೇಕೆದಾಟು ಯೋಜನೆಗೆ ಬಜೆಟ್​ನಲ್ಲಿ ಯಾವುದೇ ಅನುದಾನ ನೀಡದೆ ಕಾಂಗ್ರೆಸ್ ಮಾಡಿದ ಪಾದಯಾತ್ರೆ ಕೇವಲ ರಾಜಕೀಯ ಸ್ಟಂಟ್ ಆಗಿದೆ ಎಂದು ಆರೋಪಿಸಿದ್ದಾರೆ.

ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ : ರಾಜ್ಯದ 24.67 ಲಕ್ಷ ಹಾಲು ಉತ್ಪಾದಕರಿಗೆ ಅನುಕೂಲವಾಗಲು ಸಾವಿರ ಕೋಟಿ ಅನುದಾನದಡಿ ಸ್ಥಾಪಿಸಿದ್ಧ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ರದ್ಧುಗೊಳಿಸಲು ನಿರ್ಧರಿಸಿದೆ. ಶ್ರಮ ಶಕ್ತಿ ಯೋಜನೆ ರದ್ಧತಿಗೆ ಮುಂದಾಗಿದೆ. ಬಿಜೆಪಿ ಸರ್ಕಾರ ಬಜೆಟ್‍ನಲ್ಲಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಡಿಬಿಟಿ ಮೂಲಕ ಮಾಸಿಕ ರೂ. 500 ಸಹಾಯಧನ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಅದನ್ನು ರದ್ದುಗೊಳಿಸಲು ನಿರ್ಣಯಿಸಿದೆ. 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳ ರೈತರಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ಜಾರಿ ಮಾಡಲಾಗಿತ್ತು. ಅದನ್ನು ರದ್ದುಗೊಳಿಸಲಾಗಿದೆ. ಸಿರಿಧಾನ್ಯ ಸಂಸ್ಕರಿಸುವ ರೈತ ಉತ್ಪಾದಕ ಸಂಸ್ಥೆಗಳಿಗೆ ಪ್ರಾಶಸ್ತ್ಯ ನೀಡಲಾಗಿತ್ತು. ಆ ಯೋಜನೆಯನ್ನು ರದ್ದು ಮಾಡಿದ್ದಾರೆ ಎಂದಿದ್ದಾರೆ.

ರೈತರು ಬೆಳೆದ ಬೆಳೆಗಳನ್ನು ಕೊಯ್ಲೋತ್ತರ ನಿರ್ವಹಣೆ ಮಾಡಲು ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜನಕ್ಕೆ ಬಿಜೆಪಿ ಸರ್ಕಾರ 100 ಕೋಟಿ ಹಣವನ್ನು ನೀಡಿತ್ತು. ಈ ಯೋಜನೆಯನ್ನು ಕೈ ಬಿಡಲಾಗಿದೆ. ಸಹಸ್ರ ಸರೋವರ ಮತ್ತು ಸಹ್ಯಾದ್ರಿ ಸಿರಿ ಯೋಜನೆಯಡಿ 75 ಕೋಟಿ ಅನುದಾನ ನೀಡಿ ರೈತರ ಜಮೀನುಗಳಲ್ಲಿ ಜಲ ಹೊಂಡ ನಿರ್ಮಿಸುವ ಜಲ ನಿಧಿ ಯೋಜನೆ ಜಾರಿ ಮಾಡಲಾಗಿತ್ತು. ಆ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೈ ಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave A Reply

Your email address will not be published.