ರಾಮನಗರ: ಬಾಕಿ ಉಳಿಸಿಕೊಂಡಿರುವ ಸಂಬಳ ಕೊಡುವಂತೆ ಒತ್ತಾಯಿಸಿ ಇಬ್ಬರು ಪೌರಕಾರ್ಮಿಕರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಪಂಚಾಯತ್ ಕಚೇರಿಯ ಮುಂಭಾಗ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ರಂಗಯ್ಯ ಮತ್ತು ಸುರೇಶ್ ಎಂಬವರು 15 ತಿಂಗಳಿಂದ ವೇತನ ಮಂಜೂರಾಗಿಲ್ಲ ನಮ್ಮ ವೇತನ ಕೊಡಿ ಎಂದು ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ವೇತನ ನೀಡುವ ಬಗ್ಗೆ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಪ್ರತಿಭಟನೆ ವೇಳೆ ಎಚ್ಚೆತ್ತ ಪಂಚಾಯತ್ ಆಡಳಿತ ಬಾಕಿ ಸಂಬಳ 3.20 ಲಕ್ಷ ರೂಪಾಯಿಯನ್ನು ಪಾವತಿ ಮಾಡಿದೆ. ಬಳಿಕ ಇಬ್ಬರು ಪೌರಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಈ ಬೆಳವಣಿಗೆಗೆ ಖಂಡನೆ ವ್ಯಕ್ತಪಡಿಸಿರುವ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಸಿಇಒಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಮನಗರ ಜಿ.ಪಂ ಸಿಇಒ ದಿಗ್ವಿಜಯ್ ಬೋಡ್ಕೆ, ತಕ್ಷಣ ಪೌರ ಕಾರ್ಮಿಕರ ವೇತನ ಪಾವತಿಸಲಾಗಿದೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ಸಕಾಲಕ್ಕೆ ಪೌರ ಕಾರ್ಮಿಕರಿಗೆ ವೇತನ ಪಾವತಿಗೆ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.