ಬೆಂಗಳೂರು: ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಭೀಕರ ಹತ್ಯೆಯು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಯಿಂಲೇ ಪ್ರೇರಣೆ ಪಡೆದ ವ್ಯಕ್ತಿಯೊಬ್ಬ ತನ್ನ ಲಿವ್ ಇನ್ ಸಂಗಾತಿಯನ್ನು (Live In Relationship) ರಣಭೀಕರ ಹತ್ಯೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.
56 ವರ್ಷದ ವ್ಯಕ್ತಿಯೊಬ್ಬ ತನ್ನ ಜೊತೆ ಲಿವ್ ಇನ್ ನಲ್ಲಿದ್ದ ಸಂಗಾತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆ ದೇಹವನ್ನು 20 ತುಂಡುಗಳನ್ನಾಗಿ ಮಾಡಿದ್ದಾನೆ. ಈ ಘಟನೆಯು ಕಳೆದ ಬುಧವಾರ ರಾತ್ರಿ ಬೆಳಕಿಗೆ ಬಂದಿದೆ. ಹಂತಕ ವ್ಯಕ್ತಿಯನ್ನು ಮನೋಜ್ ಸಾನೆ (56), ಮೃತಳನ್ನು ಸರಸ್ವತಿ (36) ಎಂದು ತಿಳಿದು ಬಂದಿದೆ. ದೆಹಲಿಯ ಶ್ರದ್ಧಾ ವಾಕರ್ ಹತ್ಯೆಗಿಂತಲೂ ಅತೀ ಕ್ರೋರವಾಗಿ ನಡೆದ ಘಟನೆ ಇದಾಗಿದೆ. ಇಬ್ಬರು ಕೂಡಿಯೇ ಸುಮಾರು ಮೂರು ವರ್ಷಗಳಿಂದ ಮುಂಬೈನ್ ಮೀರಾ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ವೊಂದರ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಕಳೆದ ಜೂನ್ 04 ರಂದು ಇಬ್ಬರ ಮಧ್ಯೆ ಜಗಳ ಉಂಟಾಗಿದೆ. ಈ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಂದ ಬಳಿಕ ಮರ ಕಡಿಯುವ ಯಂತ್ರದ ಸಹಾಯದಿಂದ ಮೃತ ಸಂಗಾತಿಯ ದೇಹವನ್ನು 20 ತುಂಡುಗಳನ್ನಾಗಿ ಮಾಡಿದ್ದಲ್ಲದೇ ಅದನ್ನು ಕುಕ್ಕರ್‌ನಲ್ಲಿ ಬೇಯಿಸಿ ಮೂಲಕ ವಿಕೃತಿ ಮೆರೆದಿದ್ದಾನೆ. ಬೇಯಿಸಿದ ತುಂಡುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿಟ್ಟು ವಿಲೇವಾರಿ ಮಾಡುವ ಉದ್ದೇಶ ಆತ ಹೊಂದಿದ್ದ.
ಅಷ್ಟರಲ್ಲಾಗಲೇ ಕೊಳೆದ ಸ್ಥಿತಿಯಲ್ಲಿದ ಮೃತ ದೇಹದ ದುರ್ವಾಸನೆ ಲಿವ್ ಇನ್ ಜೋಡಿಗಳಿದ್ದ ಫ್ಲಾಟ್ ಸುತ್ತಮುತ್ತಲಿನ ಮನೆಗಳಿಗೂ ಬರಲಾರಂಭಿಸಿದೆ. ಆಗ ಅಕ್ಕ ಪಕ್ಕದ ಮನೆಯವರು ಎಚ್ಚೆತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆದು ನೋಡಿದ್ದಾರೆ. ಮೂರು ಬಕೆಟ್‌ಗಳಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಇದೀಗ ಹಂತಕನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಆತ ಶ್ರದ್ಧಾ ವಾಕರ್ ಕೊಲೆಯಿಂದ ಪ್ರೇರಣೆ ಪಡೆದು ಕೊಲೆ ಮಾಡಿದ್ದು ಬಹಿರಂಗವಾಗಿದೆ. ಹಂತಕ ಕೈಗೆ ಸಿಕ್ಕು ನರಳಿದ ಸರಸ್ವತಿ ಅನಾಥಳಾಗಿದ್ದು, ಅನಥಾಶ್ರಮವೊಂದಲ್ಲಿ ನೆಲೆಸಿದ್ದಳು. ಹತ್ತು ವರ್ಷದ ಹಿಂದೆ ಸರಸ್ವತಿ ಮತ್ತು ಅಂಗಡಿ ವ್ಯಾಪರ ನಡೆಸುತ್ತಿದ್ದ ಮನೋಜ್ ಪರಸ್ಪರ ಸಂಪರ್ಕಕ್ಕೆ ಬಂದಿದ್ದರು. ಅಲ್ಲಿಂದ ಶುರುವಾದ ಅವರ ಪ್ರೀತಿ ಲಿವ್ ಇನ್ ನಲ್ಲಿದ್ದ ಸಾವಿನ ವರೆಗೂ ಬಂದು ನಿಂತಿದೆ.