ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಬಿ.ಇ. ಪದವೀಧರೆ ವಿವಾಹಿತ ಯುವತಿ ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಕಬ್ಬನ್ ಪೇಟೆಯಲ್ಲಿ ನಡೆದಿದೆ.
ಐಶ್ವರ್ಯ (24) ಸಾವಿಗೆ ಶರಣಾದ ವಿವಾಹಿತೆಯಾಗಿದ್ದಾಳೆ. 2020ರಲ್ಲಿ ಆಕೆಯ ಪೋಷಕರು ಮಂಜುನಾಥ್ ಎಂಬಾತನೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಮಂಜುನಾಥ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಐಶ್ವರ್ಯ ಕುಟುಂಬಸ್ಥರು ಮದುವೆ ಸಂದರ್ಭದಲ್ಲಿ 240 ಗ್ರಾಂ ಚಿನ್ನಾಭರಣ ಹಾಗೂ ಮೊದಲಿಗೆ 2 ಲಕ್ಷ ರೂ. ಹಣ ನೀಡಿದ್ದರು.
ನಂತರ ವರದಕ್ಷಿಣೆಗಾಗಿ ಪೀಡಿಸಿದ ಕಾರಣ ಐಶ್ವರ್ಯ ಕುಟುಂಬಸ್ಥರು ಮತ್ತೆ 5 ಲಕ್ಷ ರೂ. ಹಣವನ್ನು ಕೊಟ್ಟಿದ್ದರು. ಮೃತ ಐಶ್ವರ್ಯಗೆ ಒಂದೂವರೆ ವರ್ಷದ ಮಗು ಇದೆ. ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಐಶ್ವರ್ಯ ಇಂದು ಕುಟುಂಬಸ್ಥರಿಗೆ ಡೆತ್ ನೋಟ್ ಬರೆದು ವಾಟ್ಸಪ್ ಮೂಲಕ ಕಳುಹಿಸಿ ಕಬ್ಬನ್ ಪೇಟೆಯ 2ನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.