ವಿಧಾನ ಸಭಾ ಚುನಾವಣೆ-2023 : ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರ..: ರಾಜ್ಯದ ಜನರ ಚಿತ್ತ ದ.ಕ.ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರ ಪುತ್ತೂರಿನತ್ತ.!!!
ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರವು ಒಂದಾಗಿದ್ದು, ವಿಜಯ ಪತಾಕೆಯನ್ನು ಯಾರು ಹಾರಿಸಲಿದ್ದಾರೆ ಎಂಬ ಬಗ್ಗೆ ಕೂತೂಹಲ ಮೂಡಿಸಿದೆ.
ಈ ಬಾರಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ 8 ಮಂದಿ ಕಣಕ್ಕಿಳಿದಿದ್ದು, ಇದರಲ್ಲಿ ಮೂವರ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕಣದಲ್ಲಿರುವ 8 ಅಭ್ಯರ್ಥಿಗಳು:
ಆಶಾ ತಿಮ್ಮಪ್ಪ ಗೌಡ (ಬಿಜೆಪಿ)
ಅಶೋಕ್ ಕುಮಾರ್ ರೈ (ಕಾಂಗ್ರೆಸ್)
ದಿವ್ಯ ಪ್ರಭಾ ಚಿಲ್ಲಡ್ಕ (ಜೆಡಿಎಸ್)
ಅರುಣ್ ಕುಮಾರ್ ಪುತ್ತಿಲ (ಪಕ್ಷೇತರ)
ಡಾ. ವಿಶು ಕುಮಾರ್ (ಎಎಪಿ)
ಶಾಫಿ ಬೆಳ್ಳಾರೆ (ಎಸ್‌ಡಿಪಿಐ )
ಸುಂದರ ಕೊಯಿಲ (ಪಕ್ಷೇತರ)
ಐವನ್ ಫೆರಾವೋ (ಕೆಆರ್‌ಎಸ್)
ಈ ಬಾರಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 80.09% ಮತದಾನ ನಡೆದಿದ್ದು, 1,70,366 ಮಂದಿ ಮತ ಚಲಾಯಿಸಿದ್ದಾರೆ. 84,087 ಪುರುಷರು, 86278 ಮಹಿಳೆಯರು ಮತದಾನ ಮಾಡಿದ್ದಾರೆ. ಕಳೆದ ಬಾರಿಗೆ ಲೆಕ್ಕಾಚಾರ ಮಾಡಿದ್ರೆ ಈ ಬಾರಿ ಪುತ್ತೂರು ಕ್ಷೇತ್ರದಲ್ಲಿ ಮತದಾನ ಕುಸಿತ ಕಂಡಿದೆ.
ರಾಜಕೀಯ ಪಡಸಾಲೆಯಲ್ಲಿ ಇದೀಗ ಸೋಲು-ಗೆಲುವಿನ ಲೆಕ್ಕಾಚಾರ ಪ್ರಾರಂಭವಾಗಿದ್ದು, ನೇರ ಹಣಾಹಣಿಯಲ್ಲಿರುವ ಮೂವರಲ್ಲಿ ಯಾರು ಗೆಲುವಿನ ನಗೆ ಬೀರಲಿದ್ದಾರೆ ಎಂಬ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ.
ಪುತ್ತೂರು ಕ್ಷೇತ್ರದಲ್ಲಿನ ತ್ರಿಕೋನ ಸ್ಪರ್ಧೆಯ ಹಣಾಹಣಿ ರಾಜ್ಯದ ಕಣ್ಣನ್ನೇ ಅಗಲಿಸಿದೆ. ತೀವ್ರ ಪೈಪೋಟಿಯ ಈ ಕ್ಷೇತ್ರದಲ್ಲಿ ಗೆಲುವು ಸಣ್ಣ ಅಂತರದಲ್ಲೇ ಎಂಬುದು ಬಹುತೇಕ ಖಚಿತವಾದಂತಿದೆ.
ಬಿಜೆಪಿ ಪಾಲಿಗೆ ಪುತ್ತೂರು ಹಿಂದುತ್ವದ ಪ್ರಯೋಗ ಶಾಲೆ. ಇದೇ ಕೋಟೆಯಲ್ಲೀಗ ಅಸಲಿ ಹಿಂದುತ್ವ ಯಾರದ್ದು ಎನ್ನುವುದೇ ವಿಷಯ. ಇದಕ್ಕೆ ಕಾರಣ ಬಿಜೆಪಿ ಮತ್ತು ಹಿಂದೂ ಮುಖಂಡನ ಸ್ಪರ್ಧೆ. ಇಬ್ಬರ ವಿಷಯವೂ ಒಂದೇ. ಹೀಗಾಗಿ ಮತದಾರ ಯಾರದ್ದು ಅಸಲಿ ಹಿಂದುತ್ವ ಎಂದು ತೀರ್ಪು ನೀಡುತ್ತಾನೋ ಎಂಬುದೇ ಕುತೂಹಲ. ರಾಜ್ಯ ಮತ್ತು ರಾಷ್ಟ್ರ ನಾಯಕರು ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಿದ್ದರು.
ಪಕ್ಷೇತರ ಹಾಗೂ ಬಿಜೆಪಿ ನಡುವಿನ ಕಿತ್ತಾಟದಲ್ಲಿ ಕಾಂಗ್ರೆಸ್‌ಗೆ ಲಾಭ ಅನ್ನುವ ಭಾವನೆ ಮೇಲ್ನೋಟಕ್ಕೆ ಎನಿಸಿದರೂ ಅದು ಪೂರ್ಣಸತ್ಯವಲ್ಲ. ಬಹಳ ವಿಚಿತ್ರವಾದ ಪರಿಸ್ಥಿತಿ ಕಣದಲ್ಲಿದೆ. ಒಬ್ಬರ ಸೋಲು, ಮತ್ತೊಬ್ಬರ ಗೆಲುವು ಎನ್ನುವುದು ಸಾಮಾನ್ಯ ಹೇಳಿಕೆ. ಇಲ್ಲಿ ಒಬ್ಬರ ಗೆಲುವು ಹಲವರ ಸೋಲು, ಹಲವರ ಸೋಲು ಒಬ್ಬನ ಗೆಲುವು ಎನ್ನುವಂತಾಗಿದೆ. ಈ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆಯಲ್ಲಿರುವ ಏಕೈಕ ಕ್ಷೇತ್ರವಿದು.
ಸಂಘಪರಿವಾರದ ಹಿನ್ನೆಲೆಯುಳ್ಳ ಮೂವರು ಅಭ್ಯರ್ಥಿಗಳು ಪರಸ್ಪರ ಎದುರಾಳಿಗಳಾಗಿದ್ದು, ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ ಎನ್ನುವ ಗಾದೆ ಮಾತಿನಂತೆ ಕ್ಷೇತ್ರದ ಫಲಿತಾಂಶ ಬರುತ್ತೋ ಅಥವಾ ಬಿಜೆಪಿ ಭದ್ರಕೋಟೆಯನ್ನು ಬಿಜೆಪಿ ಉಳಿಸಿಕೊಳ್ಳುತ್ತೋ..!! ಅಥವಾ ಹಿಂದುತ್ವ ಆಧಾರದಡಿಯಲ್ಲಿ ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿ ಜಯಭೇರಿ ಬಾರಿಸುತ್ತಾರೋ ಎಂದು ಕಾದು ನೋಡಬೇಕಿದೆ.
ನಾಳೆ ಮಂಗಳೂರಿನ ಸುರತ್ಕಲ್ ನ ಎನ್.ಐ.ಟಿ.ಕೆ ಯಲ್ಲಿ ಮತ ಎಣಿಕೆ ನಡೆಯಲಿದೆ.
ಬೆಟ್ಟಿಂಗ್ ಶುರುವಿಟ್ಟುಕೊಂಡವರಿಗೆ ಫುಲ್ ಕನ್ಫ್ಯೂಷನ್..!!
ಮತ ಚಲಾವಣೆ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು ಒಂದು ಹಂತದ ನಿಟ್ಟುಸಿರು ಬಿಟ್ಟಿರಬಹುದು. ಆದರೆ, ವಾಸ್ತವವಾಗಿ ಈಗಿನಿಂದಲೇಅವರ ಹೃದಯಬಡಿತ ಹೆಚ್ಚಾಗಿದೆ. ಮತ ಎಣಿಕೆ ನಡೆಯುವ ಶನಿವಾರದವರೆಗೂ ಅವರ ತಲೆಯಲ್ಲಿ ಸೋಲು- ಗೆಲುವಿನ ಲೆಕ್ಕಾಚಾರದ ಅಂಶಗಳೇ ಓಡುತ್ತಿರುತ್ತವೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಮತದಾನ ಅಂತ್ಯಗೊಳ್ಳುತ್ತಿದ್ದಂತೆ ಈಗ ಬೂತ್‌ಮಟ್ಟದಲ್ಲಿ ನಡೆದಿರುವ ಶೇಕಡವಾರು ಮತ ಚಲಾವಣೆಯ ಲೆಕ್ಕವಿಟ್ಟುಕೊಂಡು ತಾಳೆ ಹಾಕುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇಡೀ ದಿನ ಕ್ಷೇತ್ರದಮತಗಟ್ಟೆಗಳಲ್ಲಿ ಕಾಣಿಸಿಕೊಂಡ ಮತದಾರರನ್ನೇ ನೋಡಿಲೆಕ್ಕ ಹಾಕುವ ಕೆಲಸವೂ ನಡೆದಿದೆ.
ತಮ್ಮ ಪಕ್ಷದ ಮತದಾರರೆಂದು ಗುರುತಿಸಿಕೊಂಡಿರುವ ರಾಜಕೀಯಪಕ್ಷಗಳಿಗೆ ಶೇ.60 ರಿಂದ 70 ರಷ್ಟು ಲೆಕ್ಕ ಸಿಗುವುದೇ ಇಲ್ಲಿಂದ. ಇನ್ನುಳಿದ ಲೆಕ್ಕವನ್ನು ಚಲಾವಣೆಯಾದ ಮತಗಳ ಆಧಾರದ ಮೇಲೆ ಹಾಕುತ್ತಾರೆ.
ಒಂದೆಡೆ ಮತದಾನ ಅಂತ್ಯಗೊಳ್ಳುತ್ತಿದ್ದಂತೆ ಗೆಲ್ಲುವ ಪಕ್ಷಯಾವುದು..!!?? ಸಿಎಂ ಯಾರಾಗುತ್ತಾರೆ..!?? ಹಾಗೂ ಯಾವಅಭ್ಯರ್ಥಿ ಗೆಲ್ಲುತ್ತಾರೆ ಎಂಬುದರ ಮೇಲೆ ಬೆಟ್ಟಿಂಗ್ ಕಟ್ಟುವುದು ಶುರುವಾಗಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದರ ಮೇಲೂ ಬೆಟ್ಟಿಂಗ್ ನಡೆದಿದೆ. ಅಷ್ಟೇ ಅಲ್ಲದೇ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಪುತ್ತಿಲ ರವರು ಹೆಚ್ಚು ಮತ ಗಳಿಸುತ್ತಾರೆಯೇ ಅಥವಾ ಬಿಜೆಪಿ ಅಭ್ಯರ್ಥಿ ಹೆಚ್ಚು ಮತ ಗಳಿಸುತ್ತಾರೆಯೇ ಎಂಬ ಬಗ್ಗೆಯೂ ಹಲವು ಮಂದಿಯ ನಡುವೆ ಬೆಟ್ಟಿಂಗ್ ನಡೆದಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ..