ಮಂಗಳೂರು: ರಾಜ್ಯದಲ್ಲಿ 50 ಸಾವಿರ ಶಾಲಾ ಶಿಕ್ಷಕರ ಕೊರತೆ ಇದೆ. ಎಲ್ಲವನ್ನೂ ಭರ್ತಿ ಮಾಡಲು ಕಾನೂನು ತೊಡಕಿದೆ. ಆದರೆ 13 ಸಾವಿರದಷ್ಟು ಶಿಕ್ಷಕರ ನೇಮಕವನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕನಿಷ್ಠ ಅವಧಿಯಲ್ಲಿ ದಾಖಲೆ ಮಟ್ಟದಲ್ಲಿ ಶಾಲಾ ಶಿಕ್ಷಕರ ವರ್ಗಾವಣೆಗೆ ಕೌನ್ಸಿಲಿಂಗ್ ಮಾಡಿದ್ದೇವೆ. ಎರಡು ತಿಂಗಳಲ್ಲಿ 25 ಸಾವಿರದಷ್ಟು ಶಿಕ್ಷಕರ ವರ್ಗಾವಣೆ ಮಾಡಿದ್ದೇವೆ. ಸೀಮಿತ ಅವಧಿಯಲ್ಲಿ ಇದು ದೊಡ್ಡ ಮಟ್ಟದ ಸಾಧನೆ ಎಂದು ಹೇಳಿದರು. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲು ರಾಜ್ಯದ್ದೇ ಆದ ಶಿಕ್ಷಣ ನೀತಿಯನ್ನು ತರುತ್ತೇವೆ. ನಮ್ಮದೇ ಚಿಂತನೆ, ನಮ್ಮದೇ ಆದ ಶಿಕ್ಷಣ ತರಬೇಕೆಂಬ ಯೋಚನೆ ಇದೆ. ಇದಕ್ಕಾಗಿ ತಜ್ಞರ ಸಮಿತಿಯನ್ನು ಮಾಡಲಿದ್ದೇವೆ. ಆಗಸ್ಟ್ 2ರ ಬಳಿಕ ಈ ಕುರಿತಾಗಿ ಉನ್ನತ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ಮಾಡುತ್ತೇವೆ. ಮುಂದಿನ ವರ್ಷಕ್ಕೆ ಪ್ರತ್ಯೇಕ ಪಠ್ಯವನ್ನು ಜಾರಿಗೆ ತರುವುದಾಗಿ ಹೇಳಿದರು.
ಸರಕಾರಿ ಶಾಲೆಗಳ ಸ್ಥಿತಿಯನ್ನು ಉತ್ತಮ ಪಡಿಸುವುದು, ಶಿಕ್ಷಕರ ನೇಮಕಗೊಳಿಸುವುದು, ನವೋದಯ, ಕರ್ನಾಟಕ ಪಬ್ಲಿಕ್ ಶಾಲೆಗಳಂತಹ ಶಿಕ್ಷಣ ಕೇಂದ್ರಗಳನ್ನು ಹೆಚ್ಚಿಸಲು ಒತ್ತು ನೀಡಿದ್ದೇವೆ. ವಿದ್ಯಾರ್ಥಿ ದಿಸೆಯಲ್ಲೇ ಮರ, ಗಿಡಗಳ ಬಗ್ಗೆ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಈ ಬಾರಿ ಅರಣ್ಯ ಇಲಾಖೆ ಜೊತೆ ಸೇರಿ ಮಕ್ಕಳಿಂದಲೇ 50 ಲಕ್ಷ ಸಸಿಗಳನ್ನು ನೆಡುವ ಯೋಜನೆ ಹಾಕಿದ್ದೇವೆ. ಶಾಲೆಯ ಮುಂದುಗಡೆಯೇ ಪ್ರತಿ ದಿನ ಮಕ್ಕಳು ನೋಡುತ್ತ ಬೆಳೆಯುವಂತಾಗಬೇಕು ಎಂದು ಹೇಳಿದರು.
ಬಿಜೆಪಿ 66 ಅಲ್ಲ, 27ಕ್ಕೆ ಕುಸಿಯಲಿದೆ
ಬಿಜೆಪಿಯವರು ನೀಚ ಬುದ್ಧಿ ಮಾಡಿಕೊಂಡೇ ಹೋಗಲಿ. ಹೊಡಿ, ಬಡಿ, ಚರಂಡಿ ಅಭಿವೃದ್ಧಿ ಬೇಡ ಎಂದು ಹೇಳುತ್ತಾ ಭಾರೀ ಅಹಂಕಾರದಲ್ಲಿ ಮೆರೆಯುತ್ತಿದ್ದರು. ನಿಮ್ಮ ಕೆಲಸಕ್ಕೆ ನೀವು ಎಲ್ಲಿರಬೇಕೋ ಅಲ್ಲಿಯೇ ಇರಿಸಿದ್ದಾರೆ. ನಿಮಗೆ ಈಗ 66 ಕೊಟ್ಟಿದ್ದಾರೆ, ಹೀಗೇ ಮಾಡಿಕೊಂಡು ಹೋದರೆ ಮುಂದೆ 27ಕ್ಕೆ ತಂದು ನಿಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ವಿರೋಧ ಪಕ್ಷಕ್ಕೆ ಕನಿಷ್ಠ ಕಾಮನ್ ಸೆನ್ಸ್ ಇದೆಯೇ ಎಂದು ಪ್ರಶ್ನೆ ಮಾಡಬೇಕಾಗಿದೆ. ಸದನದಲ್ಲಿ ಸ್ಪೀಕರ್ ಹುದ್ದೆಗೆ ಗೌರವ ಕೊಡದೆ ಕಾಗದ ಚೂರುಗಳನ್ನು ಹರಿದು ಬಿಸಾಕಿ, ಈಗ ಪ್ರತಿಭಟನೆ ನಡೆಸುತ್ತಿದ್ದಾರೆ. ರುದ್ರಪ್ಪ ಲಮಾಣಿಯವರು ಯಾವುದೇ ಗಾಡ್ ಫಾದರ್ ಇಲ್ಲದೆ ಅತ್ಯಂತ ಕೆಳ ಸಮಾಜದಿಂದ ಮೇಲೆ ಬಂದವರು. ಅವರು ಪೀಠದಲ್ಲಿದ್ದಾಗ ಬಿಜೆಪಿಯವರು ಹೀಗೆ ನಡೆದುಕೊಂಡಿದ್ದು ದಲಿತ ವ್ಯಕ್ತಿಗೆ ಮಾಡಿದ ಅವಮಾನ ಎಂದು ಹೇಳಿದರು.
ರಾಜ್ಯದ ಆರ್ಥಿಕತೆ ಮೇಲೆ ತರುವುದಕ್ಕಾಗಿ ಬಡವರಿಗೆ ದುಡ್ಡು ಕೊಟ್ಟಿದ್ದೇವೆ. ಬಡವರಿಗೆ ಕೊಟ್ಟ ಹಣ ಸಮಾಜದಲ್ಲಿ ಚಲಾವಣೆಗೊಂಡು ಹಿಂತಿರುಗಿ ಬರುತ್ತದೆ. ಸಿರಿವಂತರ ದುಡ್ಡು ಹೊರಗೆ ಬರುವುದಿಲ್ಲ ಎಂದು ಹೇಳಿದ ಮಧು ಬಂಗಾರಪ್ಪ, ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೂ ಮೊಟ್ಟೆ ಮತ್ತು ಬಾಳೆಹಣ್ಣು ಅಥವಾ ಚಿಕ್ಕಿ ಕೊಡುವುದಕ್ಕೆ ನಿರ್ಧರಿಸಿದ್ದೇವೆ. ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡುವುದಕ್ಕಾಗಿ ಈ ಚಿಂತನೆ ಮಾಡಿದ್ದೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ನೀರಜ್ ಪಾಲ್, ಸುಹಾನ್ ಆಳ್ವ ಮತ್ತಿತರರು ಇದ್ದರು.