ಬೆಂಗಳೂರು: ಸಚಿವ ಸ್ಥಾನ ಸಿಗದ ಕಾರಣಕ್ಕೆ ಬೇಸರಗೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸಂಪುಟ ವಿಸ್ತರಣೆಯಾದ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹರಿಪ್ರಸಾದ್ ಅವರು ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಹೋರಾಟದ ಮುಂಚೂಣಿಯಲ್ಲಿದ್ದರು. ಜತೆಗೆ, ಅವರು ಹೈಕಮಾಂಡ್ ಜತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಹಿರಿತನದ ಆಧಾರದಲ್ಲಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲೂ ಇದ್ದರು. ಆದರೆ, ಹರಿಪ್ರಸಾದ್ ಸೇರ್ಪಡೆಗೆ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಶಿವಕುಮಾರ್ ಪಟ್ಟು ಹಿಡಿದಿದ್ದರು. ಇದಕ್ಕೆ ಸಿದ್ದರಾಮಯ್ಯ ಕೊನೆಯವರೆಗೆ ಒಪ್ಪಲೇ ಇಲ್ಲ. ಈಡಿಗ ಕೋಟಾದಲ್ಲಿ ಹರಿಪ್ರಸಾದ್ ಬದಲು ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಿದ್ದರಾಮಯ್ಯ ಹಟ ಹಿಡಿದರು.
ಅಮೆರಿಕದಲ್ಲೂ ʻದೀಪಾವಳಿʼಗೆ ಸರ್ಕಾರಿ ರಜೆ..! ಯುಎಸ್ ಸಂಸತ್ತಿನಲ್ಲಿ ಮಸೂದೆ ಮಂಡನೆ
‘ಅವರ ಸೇರ್ಪಡೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷಕ್ಕೆ ಇನ್ನಷ್ಟು ಅನುಕೂಲವಾಗಲಿದೆ. ಜತೆಗೆ, ಯುವ ನಾಯಕರು. ನಟ ಶಿವರಾಜ ಕುಮಾರ್ ಅವರು ಅನೇಕ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ಹೀಗಾಗಿ, ಮಧು ಅವರನ್ನು ಸೇರಿಸಿಕೊಳ್ಳಲೇಬೇಕು ಎಂದು ಸಿದ್ದರಾಮಯ್ಯ ಒತ್ತಡ ಹೇರಿದರು. ಇದಕ್ಕೆ ಹೈಕಮಾಂಡ್ ಸಹ ಒಪ್ಪಿತು ಎಂದು ಮೂಲಗಳು ಹೇಳಿವೆ. ಮಾಜಿ ಶಾಸಕ ಎನ್.ಎಸ್.ಬೋಸರಾಜು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ‘ಹೈಕಮಾಂಡ್‌ನಿಂದ ನನಗೆ ಯಾವುದೇ ಕರೆ ಬಂದಿಲ್ಲ. ತಡ ರಾತ್ರಿ ಕರೆ ಬಂದರೂ ಬರಬಹುದು’ ಎಂದು ಬೋಸರಾಜು ತಿಳಿಸಿದರು. ಪರಿಷತ್‌ನ ಮಾಜಿ ಸದಸ್ಯರೂ ಆಗಿರುವ ಬೋಸರಾಜು ಅವರು ಈ ಸಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ‘ನಿಮಗೆ ಟಿಕೆಟ್ ನೀಡುವುದಿಲ್ಲ. ಎರಡು ವರ್ಷಗಳ ಅವಧಿಗೆ ಸಚಿವರನ್ನಾಗಿ ಮಾಡುತ್ತೇವೆ. ಪರಿಷತ್ ಸದಸ್ಯರನ್ನಾಗಿ ಮಾಡುತ್ತೇವೆ’ ಎಂದು ರಾಜ್ಯ ನಾಯಕರು ಬೋಸರಾಜು ಅವರಿಗೆ ವಾಗ್ದಾನ ನೀಡಿದ್ದರು. ಹೀಗಾಗಿ, ಅವರಿಗೆ ಈಗ ಅವಕಾಶ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಹರಿಪ್ರಸಾದ್ ಅವರಿಗೆ ಯಾವುದೇ ಕಾರಣಕ್ಕೆ ಸಚಿವ ಸ್ಥಾನ ನೀಡಬಾರದು ಎಂದು ಹಟಕ್ಕೆ ಬಿದ್ದಿರುವ ಸಿದ್ದರಾಮಯ್ಯ ಅವರು ಬೋಸರಾಜು ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ ಎಂದೂ ಮೂಲಗಳು ಹೇಳಿವೆ.