ಬೆಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸರ್ಕಾರದ ಸಾಧನೆ, ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮ ಸರ್ಕಾರಕ್ಕೆ ನೈತಿಕ ಸ್ಥೈರ್ಯ ತುಂಬಲಿದೆ ಎಂದು ಕಾಂಗ್ರೆಸ್ ಕೊಂಡಾಡಿದೆ.
ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದಿರುವ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳ ಕಚೇರಿ, ‘ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆಯವರು ನಾನು ಮಂಡಿಸಿದ 14ನೇ ಬಜೆಟ್‌ನ ಫಲಶ್ರುತಿಯನ್ನು ಶ್ಲಾಘಿಸಿ ಹಾಗೂ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಸಿಕ್ಕಿರುವ ಜನ ಮನ್ನಣೆಗೆ ಮೆಚ್ಚುಗೆ ಸೂಚಿಸಿ ಬರೆದಿರುವ ಪತ್ರಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
‘ಶಕ್ತಿ ಯೋಜನೆಯಿಂದಾಗಿ ಧರ್ಮಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ಅನೇಕ ಮಹಿಳೆಯರು ನಿಮ್ಮ ಹೆಸರಿನಲ್ಲಿ ಮಂಜುನಾಥ ಸ್ವಾಮಿಗೆ ಸೇವೆ–ಕಾಣಿಕೆ ಸಲ್ಲಿಸುತ್ತಿದ್ದಾರೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಬಜೆಟ್ ಕುರಿತು ಪತ್ರದಲ್ಲಿ ಉಲ್ಲೇಖಿಸಿರುವ ಹೆಗ್ಗಡೆಯವರು, ‘ಧರ್ಮಸ್ಥಳಕ್ಕೆ ಬರುವವರಲ್ಲಿ ವಿಶೇಷವಾಗಿ ಮಹಿಳೆಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಯೋಜನೆಗಳ ಮೂಲಕ ಜನರಿಗೆ ಉಪಯುಕ್ತ ಕಾರ್ಯಕ್ರಮ ನೀಡಿದ್ದೀರಿ. ಜೈನ ಸಮುದಾಯಕ್ಕೆ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಿರುವ ವಿಚಾರ ತಿಳಿದು ಇಡೀ ಸಮಾಜಕ್ಕೆ ಸಂತೋಷವಾಗಿದೆ’ ಎಂದು ಹೇಳಿದ್ದಾರೆ. ‘ಅವಕಾಶ ಇದ್ದಾಗ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡು ಹೋಗಬೇಕೆಂಬುದು ತಮ್ಮ ಅಪೇಕ್ಷೆ’ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.