ಮಂಗಳೂರು: ಮಂಗಳೂರಿನಲ್ಲಿ ಸಿ.ಜಿ.ಹೆಚ್.ಎಸ್. ವೆಲ್ ನೆಸ್ ಸೆಂಟರ್ ಪ್ರಾರಂಭಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾನ್ ಸುಖ್ ಮಾಂಡವೀಯರವರನ್ನು ದೆಹಲಿಯಲ್ಲಿ ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಸಿ.ಜಿ.ಹೆಚ್.ಎಸ್. ವೆಲ್ ನೆಸ್ ಸೆಂಟರ್ ನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು.
ದಕ್ಷಿಣ ಕನ್ನಡ ಹಾಗೂ ನೆರೆಯ ಜಿಲ್ಲೆಯಲ್ಲಿ ಸುಮಾರು 29000 ಮಂದಿ ಕೇಂದ್ರ ಸರ್ಕಾರಿ ನೌಕರರು, ಅವರ ಅವಲಂಬಿತರು ಹಾಗೂ ಪಿಂಚಣಿದಾರರು ಇದ್ದು, ಮಂಗಳೂರಿನಲ್ಲಿ ಸಿ.ಜಿ.ಹೆಚ್.ಎಸ್. ಕೇಂದ್ರವನ್ನು ಸ್ಥಾಪಿಸುವ ಮೂಲಕ ಅವರಿಗೆ ಅನುಕೂಲ ಮಾಡಿಕೊಡಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ಮಾನ್ಯ ಸಚಿವರು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.