Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಸ್ನಾತಕೋತ್ತರ ಪದವಿ ಪಡೆದ ಮಂಗಳಮುಖಿಯ ಸ್ವಾವಲಂಭಿ ಬದುಕನ್ನು ಹೀಗೂ ಕಟ್ಟಿ ಕೊಳ್ಳಬಹುದು.

0

 

ಚಿತ್ರದುರ್ಗ: ಮೈಸೂರು ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಂಗಳಮುಖಿ ಡಾ.ಅರುಂಧತಿ ಕೋಳಿ, ಕುರಿ, ಮೇಕೆ ಸಾಕಾಣಿಕೆಯಿಂದ

ಸ್ವಾವಲಂಭಿ ಬದುಕು ಕಟ್ಟಿಕೊಂಡು ಇತರೆ ಮಂಗಳಮುಖಿಯರಿಗೆ ಮಾದರಿಯಾಗಿದ್ದಾರೆ.

ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿ ಸಮೀಪ ಕೊಳಹಾಳ್ನಲ್ಲಿ ಮೂರು ಚಿಕ್ಕ ಶೆಡ್ಗಳನ್ನು ಬಾಡಿಗೆ ಪಡೆದುಕೊಂಡಿರುವ

ಮಂಗಳಮುಖಿ ಡಾ.ಅರುಂಧತಿ ಆರಂಭದಲ್ಲಿ ಐದು ಕೋಳಿ ಮರಿಗಳನ್ನು ತಂದು ಸಾಕಿದ್ದರ ಫಲವಾಗಿ ಈಗ ಎಪ್ಪತ್ತು ಮೈಸೂರು ನಾಟಿ ಕೋಳಿಗಳಿವೆ. ದಿನಕ್ಕೆ ಮೂವತ್ತರಿಂದ ನಲವತ್ತು ಮೊಟ್ಟೆಗಳು ಸಿಗುತ್ತವೆ. ಹತ್ತು ರೂ.ನಂತೆ ಒಂದು ಮೊಟ್ಟೆ ಮಾರಾಟ ಮಾಡುತ್ತಾರೆ. ಹೋಲ್ಸೇಲ್ನಂತಾದರೆ ಎಂಟು ರೂ.ಗೆ ಒಂದು ಮೊಟ್ಟೆ. ಇನ್ನೂರು ರೂ.ಗೆ ಒಂದು ಕೆ.ಜಿ.ಯಂತೆ ಕೋಳಿ ಮಾರಾಟ ಕೂಡ ಮಾಡಿ ಛಲದಿಂದ ಬದುಕಬೇಕೆಂಬುದು ಇವರ ಆಸೆ. ಕೆಲವೊಮ್ಮೆ ಕೋಳಿ ಖರೀಧಿಗೆ ಯಾರು ಬರದಿದ್ದಾಗ ಚಿತ್ರದುರ್ಗದಲ್ಲಿ ಪ್ರತಿ ಸೋಮವಾರ ನಡೆಯುವ ಕೋಳಿ ಸಂತೆಗೆ ಕೋಳಿಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿಕೊಂಡು ಬರಬೇಕಾಗುತ್ತದೆ. ಇಷ್ಟೆಲ್ಲಾ ಜಂಜಾಟದ ನಡುವೆ ಮುಂಗುಸಿ, ನಾಯಿಗಳು ಕೋಳಿಗಳನ್ನು ಹಿಡಿದು ತಿನ್ನದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಬೇಕಾಗುತ್ತದೆ.

ಹೋಟೆಲ್, ಬಸ್ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಹೀಗೆ ಜನನಿಬಿಡ ಪ್ರದೇಶಗಳಲ್ಲಿ ಭಿಕ್ಷಾಟನೆ ವೃತ್ತಿಯಲ್ಲಿ ತೊಡಗುವ ಲೈಂಗಿಕ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುವ ಈಗಿನ ಸಮಾಜದಲ್ಲಿ ಮತ್ತೊಬ್ಬರ ಬಳಿ ಹೋಗಿ ಕೈಚಾಚಲು ನನಗೆ ಇಷ್ಟವಿಲ್ಲ. ಅದಕ್ಕಾಗಿ ಕೋಳಿ, ಕುರಿ, ಮೇಕೆ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದೇನೆ. ಮಂಗಳಮುಖಿಯರು ಎನ್ನುವ ಕಾರಣಕ್ಕಾಗಿ ಮನೆಯಲ್ಲಿ ಅಪ್ಪ, ಅಮ್ಮ, ಒಡಹುಟ್ಟಿದವರು ಯಾರು ನಮ್ಮನ್ನು ಸೇರುವುದಿಲ್ಲ. ತಾತ್ಸಾರದಿಂದ ಕಾಣುತ್ತಾರೆ. ಸ್ವಂತ ಊರು ಮಂಡ್ಯ. ಇಲ್ಲಿಗೆ ಬಂದು ಮೂರ್ನಾಲ್ಕು ವರ್ಷಗಳಾಯಿತು ಎಂದು ಭಾರವಾದ ಮನಸ್ಸಿನಿಂದ ಹೇಳುವಾಗ ಅವರ ಕಣ್ಣಾಲಿಗಳು ಒದ್ದೆಯಾಗಿರುತ್ತವೆ.

ಒಂದು ಶೆಡ್ನಲ್ಲಿ ಕೋಳಿ, ಮತ್ತೊಂದರಲ್ಲಿ ಕುರಿ, ಮೇಕೆಗಳನ್ನು ಸಾಕುತ್ತಿರುವ ಇವರು ಮತ್ತೊಂದು ಚಿಕ್ಕ ಶೆಡ್ನಲ್ಲಿ ಇತರೆ ಮಂಗಳಮುಖಿಯರೊಂದಿಗೆ ವಾಸಿಸುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಸಾಕಾಣಿಕೆ ಮಾಡಬೇಕು. ಅದಕ್ಕೆ ಸರ್ಕಾರದಿಂದ ಯಾವ ರೀತಿಯ ಪ್ರೋತ್ಸಾಹವೂ ಸಿಗುತ್ತಿಲ್ಲ ಎನ್ನುವ ಕೊರಗು ಡಾ.ಅರುಂಧತಿಯನ್ನು ಕಾಡುತ್ತಿದೆ. ರೋಗಗಳು ಕಾಣಿಸಿಕೊಂಡರೆ ಪಶುವೈದ್ಯಕೀಯ ಆಸ್ಪತ್ರೆಗೆ ಹೋಗಲು ವಸತಿಯಿಲ್ಲ. ಸಹಾಯವಾಣಿಗೆ ನೂರು ಸಲ ಕರೆ ಮಾಡಿದರೂ ಸ್ಪಂದಿಸುವುದಿಲ್ಲ. ಮೇವಿಗೆ ಕೊರತೆಯಿದೆ. ಪ್ರತಿ ತಿಂಗಳು ಒಂದೊಂದು ಶೆಡ್ಗೆ ಮೂರುವರೆ ಸಾವಿರ ರೂ. ಬಾಡಿಗೆ ಕೊಡಬೇಕು. ಇಷ್ಟೆಲ್ಲಾ ಸಮಸ್ಯೆಗಳಿಂದ ನಲುಗಿ  ಒಮ್ಮೊಮ್ಮೆ ಇದರ ಸಹವಾಸವೇ ಬೇಡ ಎನ್ನುತ್ತಾರೆ.

ಮಂಗಳಮುಖಿಯರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳಿಗಾಗಿ ಅನೇಕ ಹೋರಾಟ, ಚಳುವಳಿಯಲ್ಲಿ ತೊಡಗುವ ಡಾ.ಅರುಂಧತಿರವರ ಸಮಾಜ ಸೇವೆಯನ್ನು ಗುರುತಿಸಿ ಜರ್ಮನ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ. ಮೊದಲು ಐದು ಮೇಕೆಗಳನ್ನು ತಂದು ಸಾಕಾಣಿಕೆ ಆರಂಭಿಸಿದ ಇವರ ಬಳಿ ಈಗ 25 ಹೆಣ್ಣು ಮೇಕೆ, ಐದು ಚಿಕ್ಕ ಮರಿ, ಎರಡು ಟಗರು, ಆರು ಓತಗಳಿವೆ. ಬೇರೆ ಮಂಗಳಮುಖಿಯರಿಗೆ ಇಲ್ಲಿಯವರೆಗೂ ಹದಿನಾರು ಮೇಕೆಗಳನ್ನು ಉಚಿತವಾಗಿ ನೀಡಿದ್ದಾರೆ. ಅವರು ಸಾಕಿ ಮುಂದೆ ಮರಿಗಳನ್ನು ಇತರೆ ಮಂಗಳಮುಖಿಯರಿಗೆ ನೀಡಬೇಕು. ಹೀಗೆ ಒಬ್ಬರಿಗೊಬ್ಬರು ಆಸರೆಯಾಗಬೇಕು ಎನ್ನುವ ಷರತ್ತು ಇವರದು.

ಉದ್ಯೋಗದಲ್ಲಿ ಶೇ.1 ರಷ್ಟು ಮೀಸಲಾತಿಯನ್ನು ಸರ್ಕಾರ ಘೋಷಿಸಿದೆ. ಸೌಲಭ್ಯಗಳನ್ನು ನೀಡಬೇಕಾದರೆ ನೂರಾರು ದಾಖಲೆಗಳನ್ನು ಕೇಳುತ್ತದೆ. ಎಲ್ಲಿಂದ ತರೋದು. ಯಾವುದಾದರೂ ತರಬೇತಿ ಪಡೆದುಕೊಳ್ಳಲು ವಯಸ್ಸು ಮೀರಿದೆ. ಬಸ್ ಪಾಸಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ಗಳಿಗಾಗಿ ಹರಸಾಹಸಪಟ್ಟರು ಸಿಗುವುದು ಕಷ್ಟ. ಚಿತ್ರದುರ್ಗದಲ್ಲಿ ಒಂದು ಸಾವಿರ ಮಂಗಳಮುಖಿಯರಿದ್ದಾರೆ. ನಿಶ್ಚಿಂತೆಯಿಂದ ಬದುಕಲು ಆಗುತ್ತಿಲ್ಲ. ಎಲ್ಲಾ ರಂಗಗಳಲ್ಲಿಯೂ ನಾವುಗಳು ತುಳಿತಕ್ಕೊಳಪಡುತ್ತಿದ್ದೇವೆ. ವಾಸಿಸಲು ಸ್ವಂತ ಮನೆಯಿಲ್ಲ. 2016 ರಿಂದಲೂ ಮನೆಗಳಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ವಸತಿ ಸಮಸ್ಯೆಯಿದೆ. ಜೀವನೋಪಾಯಕ್ಕಾಗಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಸರ್ಕಾರ ಮಂಗಳಮುಖಿಯರ ಯೋಗಕ್ಷೇಮ ಕೇಳಬೇಕು. ಅನುಕಂಪ ತೋರಿದರೆ ಸಾಲದು. ಸೌಲಭ್ಯಗಳನ್ನು ಕೊಟ್ಟರೆ ಭಿಕ್ಷಾಟನೆ ವೃತ್ತಿ ತೊರೆದು ಸಮಾಜದಲ್ಲಿ ಎಲ್ಲರಂತೆ ಮುಖ್ಯವಾಹಿನಿಗೆ ಬರಲು ಅವಕಾಶಗಳನ್ನು ನೀಡಬೇಕೆನ್ನುವುದು ಡಾ.ಅರುಂಧತಿರವರ ಮನವಿ.

 

 

Leave A Reply

Your email address will not be published.