ಬೆಂಗಳೂರು: 16ನೇ ವಿಧಾನಸಭೆಯ ಮೊದಲ ವಿಶೇಷ ಅಧಿವೇಶನವು ಇಂದಿನ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಮೊದಲ ಎರಡು ದಿನ 224 ನೂತನ ಶಾಸಕರ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ನಡೆಯಲಿದೆ.
ಅದರಂತೆ ಇಂದು(ಮೇ 22) ಮೊದಲ ದಿನದ ಅಧಿವೇಶದಲ್ಲಿ ನೂತನ ಶಾಸಕರು ದೇವರು, ಸಂವಿಧಾನ ಹಾಗೂ ರೈತರ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿದರು. ಆದರೆ ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಅವರ ಮಾತು ಉಲ್ಲಂಘಿಸಿ ಚನ್ನಗಿರಿಯ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಇದು ಎಲ್ಲರ ಹುಬ್ಬೇರುವಂತೆ ಮಾಡಿತು. ಇನ್ನು ಬಸವರಾಜ್ ಶಿವಗಂಗಾ ಅವರ ಪ್ರಮಾಣವಚನಕ್ಕೆ ಸದನದಲ್ಲಿ ಆಕ್ಷೇಪ ವ್ಯಕ್ತವಾಯಿತು. ಕೂಡಲೇ ಮಧ್ಯೆ ಪ್ರವೇಶಿಸಿದ ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆ ಗೊಂದಲ ಬಗೆಹರಿಸಿದರು, ಅಲ್ಲದೇ ವ್ಯಕ್ತಿ ಹೆಸರಿನ ಮೇಲೆ ಪ್ರಮಾಣ ಮಾಡಿಸದಂತೆ ವಿಧಾನಸಭೆ ಕಾರ್ಯದರ್ಶಿಗೆ ಸೂಚನೆ ನೀಡಿದರು. ಸಂವಿಧಾನದ ಪ್ರಕಾರ ಪ್ರಮಾಣವಚನ ಸ್ವೀಕರಿಸಲು ಸ್ಪೀಕರ್ ದೇಶಪಾಂಡೆ ಅವರು ನೂತನ ಶಾಸಕರಿಗೆ ಖಡಕ್ ಸೂಚನೆ ನೀಡಿದರು. ದೇವರು, ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಬೇಕು. ಅದು ಬಿಟ್ಟು ಬೇರೆ ಯಾವ ಹೆಸರಿನಲ್ಲೂ ಪ್ರಮಾಣವಚನ ಸ್ವೀಕರಿಸಬೇಡಿ ಎಂದು ಸಲಹೆ ನೀಡಿದರು.