ಚಿತ್ರದುರ್ಗ: ಅಮೆಜಾನ್, ಜೀ5, ಜಿಯೋ ಹಾಟ್‍ಸ್ಟಾರ್, ನೆಟ್‍ಫ್ಲಿಕ್ಸ್ ಸೇರಿದಂತೆ ಖಾಸಗಿ ಓಟಿಟಿಗಳಲ್ಲಿ ಕನ್ನಡದ ಆಯ್ದ ಚಲನಚಿತ್ರಗಳಿಗೆ ಮಾತ್ರ ವೇದಿಕೆ ದೊರಕುತ್ತಿದೆ. ಇದರಿಂದಾಗಿ ಸುಮಾರು 4 ಸಾವಿರಕ್ಕೂ ಅಧಿಕ ಕನ್ನಡ ಸಿನಿಮಾಗಳು, ವಿತರಕರು ಹಾಗೂ ಚಿತ್ರ ಮಂದಿರಗಳ ಕೊರತೆಯಿಂದ ಬಿಡುಗಡೆ ಭಾಗ್ಯವನ್ನೇ ಕಂಡಿಲ್ಲ. ಇದರಿಂದಾಗಿ ನಿರ್ಮಾಕರು, ಕಲಾವಿದರು, ತಂತ್ರಜ್ಞರು ಸಂಕಷ್ಟದಲ್ಲಿ ಇದ್ದಾರೆ. ಇಂಥ ಸಿನಿಮಾಗಳಿಗೆ ಕೇವಲ ನಮ್ಮ ರಾಜ್ಯ, ದೇಶ ಮಾತ್ರವಲ್ಲ, ಜಾಗತಿಕವಾಗಿ ವೇದಿಕೆ ಕಲ್ಪಿಸಿ ಕೊಡಲು ಸರ್ಕಾರದಿಂದಲೇ ಮುಂಬರುವ ಹೊಸ ವರ್ಷದಲ್ಲಿ ಓಟಿಟಿ ಪ್ರಾರಂಭಿಸಲಾಗುತ್ತಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಉನ್ನತ ಮಟ್ಟದ ಸಮಿತಿ ಸಹ ರಚಿಸಲಾಗಿದೆ ಎಂದು ಅಧ್ಯಕ್ಷ ಮೆಹಬೂಬ್ ಪಾಷಾ ತಿಳಿಸಿದರು.
ಓಟಿಟಿ ಸ್ಥಾಪನೆಗೆ ಸಂಬಂಧ ಈಗಾಗಲೆ ಸರ್ಕಾರ ಬಜೆಟ್‍ನಲ್ಲಿಯೇ ಘೋಷಿಸಿದೆ. ತಾಂತ್ರಿಕ ಸಿದ್ದತೆಗಳನ್ನು ಕೂಡ ಕೈಗೊಳ್ಳಲಾಗಿದೆ. ಹಲವು ಬಾರಿ ಉನ್ನತ ಮಟ್ಟದ ಸಭೆಗಳು ನಡೆದಿವೆ. ಓಟಿಟಿ ಸ್ಥಾಪನೆಯಿಂದ ಕನ್ನಡ ಸಿನಿಮಾಗಳ ಜೊತೆಗೆ ಧಾರವಾಹಿ, ಜಾನಪದ ಕಲೆ ಹಾಗೂ ಸ್ಥಳೀಯ ಮತ್ತು ಬುಡಕಟ್ಟು ಸಂಸ್ಕøತಿಗಳಿಗೂ ಸಹ ಜಾಗತಿಕ ಮಟ್ಟದಲ್ಲಿ ವೇದಿಕೆ ದೊರಕಲಿದೆ. ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಚಲನಚಿತ್ರಗಳ ವೀಕ್ಷಣೆಗೆ ಹೆಚ್ಚಿನ ದರ ವಿಧಿಸಿದರೆ, ರಾಜ್ಯ ಸರ್ಕಾರ ಪ್ರಾರಂಭಿಸಿವ ಒಟಿಟಿ ವೇದಿಕೆಯಲ್ಲಿ ಅಲ್ಪ ಮೊತ್ತ ಪಾವತಿಸಿ, ವಿಶ್ವದ ಎಲ್ಲೆಡೆ ಇರುವ ಕನ್ನಡಿಗರು ಚಂದಾದರರಾಗಿ ಕನ್ನಡ ಸಿನಿಮಾ ಹಾಗೂ ಜಾನಪದ ಕಲೆಗಳನ್ನು ವೀಕ್ಷಿಸಬಹುದಾಗಿದೆ. ಇದರಿಂದ ಸಂಕಷ್ಟದಲ್ಲಿರುವ ನಿರ್ಮಾಪಕರಿಗೆ, ನಿರ್ದೇಶಕರಿಗೆ, ನಟ ನಟಿಯರು, ಕಲಾವಿದರು ತಂತ್ರಜ್ಞರಿಗೆ ಇದರಿಂದ ಉಪಯುಕ್ತವಾಗಲಿದೆ. ಜೊತೆಗೆ ಹೊಸ ಪ್ರತಿಭೆಗಳಿಗೂ ಹೆಚ್ಚಿನ ಅವಕಾಶ ದೊರಕಲಿದೆ. ವೀಕ್ಷಣೆಯ ಆಧಾರದಲ್ಲಿ ನಿರ್ಮಾಪಕರೊಂದಿಗೆ ಲಾಭಾಂಶವನ್ನು ಹಂಚಿಕೊಳ್ಳಲಾಗುವುದು ಎಂದು ಅಧ್ಯಕ್ಷ ಮೆಹಬೂಬ್ ಪಾಷಾ ಅವರು ಸ್ಪಷ್ಟಪಡಿಸಿದರು.






























