ಕೊಚ್ಚಿ: ಶನಿವಾರ 12,000 ಕೋಟಿ ರೂ ಮೌಲ್ಯದ ಸುಮಾರು 2,500 ಕೆಜಿಗೂ ಅಧಿಕ ಶುದ್ಧತೆಯ ಮೆಥಾಂಫೆಟಮೈನ್ (ಮಾದಕವಸ್ತು) ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಜಂಟಿ ಕಾರ್ಯಾಚರಣೆ ನಡೆಸಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮತ್ತು ಭಾರತೀಯ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಹಡಗಿನಲ್ಲಿ ಅಕ್ರಮವಾಗಿ ಮಾದಕವಸ್ತು ಸಾಗಣೆ ಮಾಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಹಡುಗಗಳ ತಪಾಸಣೆ ನಡೆಸಿದ ವೇಳೆ ಭಾರೀ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ. ಮಾದಕ ವಸ್ತುಗಳ ಕಡಲ ಕಳ್ಳಸಾಗಣೆ ತಡೆಯುವ ಗುರಿ ಹೊಂದಿರುವ “ಆಪರೇಷನ್ ಸಮುದ್ರಗುಪ್ತ್”ನ ಭಾಗವಾಗಿ ಈ ಕಾರ್ಯಚರಣೆ ನಡೆಸಲಾಗಿದೆ. ಡ್ರಗ್ಸ್ ಸಾಗಿಸುತ್ತಿದ್ದ “ಮದರ್ ಶಿಪ್” ಅನ್ನು ತಡೆದ ನಂತರ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ವಶಕ್ಕೆ ಪಡೆಯಲಾಗಿದೆ. ಕಳೆದ 18 ತಿಂಗಳುಗಳಲ್ಲಿ ಎನ್‌ಸಿಬಿ ನಡೆಸಿದ ಕಾರ್ಯಚರಣೆಯಲ್ಲಿ ಮೂರು ಬಾರಿ ಬೃಹತ್ ಮೊತ್ತದ ಡ್ರಗ್ಸ್ ಜಪ್ತಿ ಮಾಡಿಕೊಂಡಿದೆ. ಎನ್‌ಸಿಬಿ ಹಾಗೂ ನೌಕಾಪಡೆಯು 2022ರ ಫೆಬ್ರವರಿಯಲ್ಲಿ ಮೊದಲ ಬಾರಿಗೆ 529 ಕೆ.ಜಿ ಹ್ಯಾಶಿಶ್, 221 ಕೆ.ಜಿ ಮೆಟಾಂಪೆಟಮೈನ್ ಹಾಗೂ 13 ಕೆ.ಜಿ ಹೆರಾಯಿನ್ ವಶಪಡಿಸಿಕೊಂಡಿದ್ದರು.