ಬೆಂಗಳೂರು: ಶೀಘ್ರವೇ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಮಾದರಿಯ ವೇತನ ಸಿಗಲಿದೆ. ಹಳೇ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಒತ್ತಡ ಹೇರಲಾಗಿದೆ ಎಂದು ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ ಎರಡು ದಿನಗಳ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಮಾದರಿಯ ವೇತನ ತೆಗೆದುಕೊಳ್ಳುವ ಹತ್ತಿರದ ದಿನಗಳಲ್ಲಿ ರಾಜ್ಯದ ಸರ್ಕಾರಿ ನೌಕರರಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಅದೇ ರೀತಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ರಾಜ್ಯ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರಿಗೆ ಹೋರಾಟವಿಲ್ಲದೆ ಆರು ಮತ್ತು ಏಳನೇ ವೇತನ ಆಯೋಗ ಜಾರಿಗೊಳಿಸಿದ್ದರು. ಇದೇ ಸರ್ಕಾರ ಇನ್ನು ಎರಡು ವರ್ಷ ಇರಲಿದ್ದು, ಕೇಂದ್ರದ ಮಾದರಿಯ ವೇತನವನ್ನು ನೌಕರರು ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ನೌಕರರ ಸಂಘ ಪ್ರಯತ್ನ ಮುಂದುವರಿಸಿದೆ. ಎನ್.ಪಿ.ಎಸ್. ಕೈಬಿಟ್ಟು ಒಪಿಎಸ್ ಜಾರಿ ಆಗಬೇಕೆಂಬ ಬೇಡಿಕೆಯ ಹೋರಾಟ ನಡೆಯುತ್ತಲೇ ಇದೆ. ರಾಜ್ಯದಲ್ಲಿ 2.85 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಭರ್ತಿ ಮಾಡುವ ನಿಟ್ಟಿನಲ್ಲಿಯೂ ನಮ್ಮ ಪ್ರಯತ್ನ ಮುಂದುವರೆದಿದೆ ಎಂದು ಹೇಳಿದ್ದಾರೆ.






























