ಚಿತ್ರದುರ್ಗ : ಅನಂತ ಜಾತಿಯ ಮರಗಳು ಹಣ್ಣನ್ನು ಕೊಡುತ್ತ ಪರೋಪಕಾರ ಮಾಡುತ್ತಿವೆ. ಸಮಾಜಕ್ಕೆ ಹಸು, ಎಮ್ಮೆ, ನದಿಗಳು ಪರೋಪಕಾರಿಯಾಗಿರುವಂತೆ ಮನುಷ್ಯನು ಸಹ ಭೂಮಿ ಮೇಲೆ ಪರೋಪಕಾರಿಯಾಗಿ ನೆಮ್ಮದಿಯ ಜೀವನ ಸಾಗಿಸಬೇಕು ಎಂದು ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಶ್ರೀ ಮುರುಘರಾಜೇಂದ್ರ ಮಠದಲ್ಲಿ ಶುಕ್ರವಾರ ನಡೆದ ಮೂವತ್ಮೂರನೆ ವರ್ಷದ ಐದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಶ್ರೀಮಠವು ಅನೇಕ ಸಮಾಜಮುಖಿ ಯೋಜನೆಗಳನ್ನು ಹಾಕಿಕೊಂಡು ಮುನ್ನೆಡೆದಿದೆ. ಅದರಲ್ಲಿ ಕಲ್ಯಾಣ ಮಹೋತ್ಸವವೂ ಒಂದು. ಸತಿ ಪತಿಗಳೊಂದಾದ ಭಕ್ತಿ ಶಿವಂಗೆ ಹಿತವಾಗಿರುತ್ತದೆ. ದಾಂಪತ್ಯದಲ್ಲಿ ಬಿರುಕು ಬರಬಾರದು. ಅದುವೇ ಆದರ್ಶ ಬದುಕು ಎನಿಸಿಕೊಳ್ಳುವುದು. ಮೇ 10ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರು ಯಾವುದೇ ಆಮಿಷಕ್ಕೊಳಗಾಗದೆ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು.
ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ಲಿಂ. ಮಲ್ಲಿಕಾರ್ಜುನ ಶ್ರೀಗಳು 17ನೆಯ ಜಗದ್ಗುರುಗಳಾಗಿ ಶ್ರೀಮಠವನ್ನು ಮುನ್ನಡೆಸಿದರು. ಮಠದ ಪಕ್ಕದ ತೆಂಗಿನ ತೋಟವನ್ನು ಅಭಿವೃದ್ಧಿಪಡಿಸಿದರು. ಶ್ರೀಗಳು ತುಂಬಾ ಸಾತ್ವಿಕರು ನಿಸ್ವಾರ್ಥಿಗಳು. ಶ್ರೀಮಠವು ಅನುಭವ ಮಂಟಪವನ್ನು ನಿರ್ಮಿಸಿ ಸರ್ವಸಮಾಜದ ಸಾವಿರಾರು ಜನರಿಗೆ ಪ್ರತಿನಿತ್ಯ ಅನ್ನದಾಸೋಹವನ್ನು ಮಾಡುತ್ತಿದ್ದು, ಪ್ರತಿತಿಂಗಳು ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ಏರ್ಪಡಿಸಿ ಎಲ್ಲ ವರ್ಗದವರು ಒಂದೇ ವೇದಿಕೆಯಲ್ಲಿ ಸೇರಿಸಿ ವಿವಾಹಗಳನ್ನು ನಡೆಸಿಕೊಂಡು ಬರುತ್ತಿರುವುದು ಸಾಮಾಜಿಕ ಕಳಕಳಿಯ ದ್ಯೋತಕವಾಗಿದೆ ಎಂದು ನುಡಿದರು.
ಶ್ರೀ ಬಸವನಾಗಿದೇವ ಸ್ವಾಮಿಗಳು ಮಾತನಾಡಿ, ಇನ್ನೊಬ್ಬರಿಗೆ ಕೇಡನ್ನು ಬಯಸದ ದಾರಿಯಲ್ಲಿ ಸಾಗಬೇಕು. ಹಿಂದೆ ನಾವು ಒಳ್ಳೆಯದನ್ನು ಮಾಡಿದರೆ ಇಂದು ಅದರ ಫಲವನ್ನು ಉಣ್ಣುತ್ತೇವೆ. ನಾವು ಯಾವುದೇ ದುರ್ಬುದ್ಧಿಗೆ ಒಳಗಾಗಬಾರದು. ಅಂತಹ ಗುಣಗಳು ಬರಬಾರದು ಎಂದರು.
ಶ್ರೀ ಬಸವ ಬೀರೇಶ್ವರ ಸ್ವಾಮಿಗಳು, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರಿದ್ದರು.
ಇದಕ್ಕು ಮುನ್ನ ಶ್ರೀ ಜಯವಿಭವ ಮುರುಘರಾಜೇಂದ್ರ ಸ್ಮರಣೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜ್ಯರು ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ 10 ಜೋಡಿಗಳ ವಿವಾಹ ನೆರವೇರಿತು.
ಉಮೇಶ್ ಪತ್ತಾರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವೀರಭದ್ರಯ್ಯ ಸ್ವಾಗತಿಸಿದರು. ಚಿನ್ಮಯಿ ದೇವರು ನಿರೂಪಿಸಿದರು.