ಒಡಿಶಾ: ಬೆಂಗಳೂರು–ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್, ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲಸೋರ್ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅವಘಡದಲ್ಲಿ ಕನಿಷ್ಠ 233 ಮಂದಿ ಮೃತಪಟ್ಟು, ಸುಮಾರು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಹನಾಗಾ ಬಜಾರ್ ನಿಲ್ದಾಣದ ಸಮೀಪ ರಾತ್ರಿ 7.20ರ ಸುಮಾರಿಗೆ ಅವಘಡ ಸಂಭವಿಸಿದೆ. ‘ಬೆಂಗಳೂರು– ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ ಪಕ್ಕದ ಹಳಿಯ ಮೇಲೆ ಬಿದ್ದಿದ್ದವು. ಈ ಬೋಗಿಗಳಿಗೆ ಕೋಲ್ಕತ್ತದಿಂದ ಚೆನ್ನೈ ಕಡೆಗೆ ಸಾಗುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಈ ರೈಲಿನ ಬೋಗಿಗಳೂ ಹಳಿ ತಪ್ಪಿ ಮಗುಚಿ ಬಿದ್ದವು. ಇದರಿಂದಾಗಿ ಪಕ್ಕದ ಹಳಿಯಲ್ಲಿ ಸಾಗುತ್ತಿದ್ದ ಸರಕು ಸಾಗಣೆ ರೈಲು ಸಹ ಅಪಘಾತಕ್ಕೆ ಒಳಗಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳಿಗಳ ಮಧ್ಯೆ ಹಲವು ಮಂದಿ ಸಿಲುಕಿರುವ ಶಂಕೆ ಇದೆ. ದುರಂತದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಕುರಿತ ಖಚಿತ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ. ‘ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಪಡೆಯ ನಾಲ್ಕು ಘಟಕಗಳು, ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ (ಎನ್ಡಿಆರ್ಎಫ್) ಮೂರು ಘಟಕಗಳು ಮತ್ತು 60 ಆಂಬುಲೆನ್ಸ್ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ತಿಳಿದು ಬಂದಿದೆ.