ಬೆಳಗಾವಿ : ಬಿಜೆಪಿಯವರು ಯದ್ವಾತದ್ವಾ ಭ್ರಷ್ಟಾಚಾರ ಮಾಡಿದ್ದಾರೆ. ಬಿಜೆಪಿ ಅತ್ಯಂತ ಭ್ರಷ್ಟ ಸರ್ಕಾರ ಎಂದು ಜನರು ಬೀದಿ ಬೀದಿಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸರ್ಕಾರ ಅಲಿಬಾಬ ಮತ್ತು 40 ಕಳ್ಳರ ಸರ್ಕಾರ ಎಂದರು.
ನಾವು ಮಾಡಿದ್ದ ಎಲ್ಲಾ ಕೆಲಸಗಳನ್ನು ಈ ಸರ್ಕಾರ ಹಾಳುಮಾಡಿದೆ. ಜಗದೀಶ್ ಶೆಟ್ಟರ್ ಅವರನ್ನು ಆಚೆ ತಳ್ಳಿದ್ದಾರೆ. ಇಂಥವರು ಯಾರಿಗೆ ರಕ್ಷಣೆ ಕೊಡುತ್ತಾರೆ? ಯಾರಿಗೆ ಗೌರವ ಕೊಡುತ್ತಾರೆ? ಯಡಿಯೂರಪ್ಪ ಅವರನ್ನು ಬಲವಂತದಿಂದ ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕಿದ್ದಾರೆ. ಅವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಲ್ಲ. ಅವರನ್ನು ಕೂಡ ಹೆದರಿಸಿದ್ದಾರೆ. ಅವರ ಕಣ್ಣಲ್ಲಿ ನೀರು ಹಾಕಿಸಿದರು, ಆರ್,ಎಸ್,ಎಸ್ ನವರ ಕೈಗೊಂಬೆಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದ್ರು. ಈ ಸರ್ಕಾರ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು ಎಂದು ವಾಗ್ದಾಳಿ ನಡೆಸಿದ್ದಾರೆ.