ಚಿತ್ರದುರ್ಗ: ಕೆನರಾ ಬ್ಯಾಂಕ್‍ನ ಸಿಎಸ್‍ಆರ್ ಫಂಡ್‍ನ ಕೆನರಾ ವಿದ್ಯಾಜ್ಯೋತಿ ಯೋಜನೆಯಡಿ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 72 ವಿದ್ಯಾರ್ಥಿನಿಯರಿಗೆ ಒಟ್ಟು ರೂ. 2,77,500/- ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕೆನರಾ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಮಣಿಪಾಲ್‍ನ ಜನರಲ್ ಮ್ಯಾನೇಜರ್ ಎಂ.ಜಿ.ಪಂಡಿತ್ ಹಾಗೂ ಸಹಾಯಕ ಜನರಲ್ ಮ್ಯಾನೇಜರ್ ವೈವಿನ್ ಶಿವಪ್ರಸಾದ್ ವಿದ್ಯಾರ್ಥಿ ವೇತನ ವಿತರಿಸಿದರು.
ಕೆನರಾ ವಿದ್ಯಾಜ್ಯೋತಿ ಯೋಜನೆಯಡಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 5,6 ಮತ್ತು 7ನೇ ತರಗತಿ ವಿದ್ಯಾರ್ಥಿನಿಯರಿಗೆ ತಲಾ ರೂ.2500/- ಮತ್ತು 8,9 ಮತ್ತು 10ನೇ ತರಗತಿ ವಿದ್ಯಾರ್ಥಿನಿಯರಿಗೆ ತಲಾ ರೂ.5000/- ವಿದ್ಯಾರ್ಥಿ ವೇತನ ನೀಡಲಾಯಿತು.
ಈ ವೇಳೆ ಮಾತನಾಡಿದ ಕೆನರಾ ಬ್ಯಾಂಕ್ ಮಣಿಪಾಲ್‍ನ ಜನರಲ್ ಮ್ಯಾನೇಜರ್ ಎಂ.ಜಿ.ಪಂಡಿತ್, ಕೆನರಾ ವಿದ್ಯಾಜ್ಯೋತಿ ಯೋಜನೆ ಕಳೆದ 10 ವರ್ಷಗಳಿಂದ ಚಾಲ್ತಿಯಲ್ಲಿದೆ. ಈ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ್ಲಿ ವ್ಯಾಸಂಗ ಮಾಡುತ್ತಿರುವ 5,6 ಮತ್ತು 7ನೇ ತರಗತಿ ಹಾಗೂ 8,9 ಮತ್ತು 10ನೇ ತರಗತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ದೇಶದ ಎಲ್ಲಾ ಕೆನರಾ ಬ್ಯಾಂಕ್ ಶಾಖೆಗಳಲ್ಲಿಯೂ ಕೆನರಾ ವಿದ್ಯಾಜ್ಯೋತಿ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯ ಲಾಭ ಪಡೆದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದ ವಿದ್ಯಾಭ್ಯಾಸಕ್ಕಾಗಿ ಸಾಲಸೌಲಭ್ಯವನ್ನೂ ನೀಡಲಾಗುವುದು ಎಂದರು.
ವಿದ್ಯಾರ್ಥಿನಿಯರು ಇನ್ನೂ ಹೆಚ್ಚು ಕಷ್ಟಪಟ್ಟು ಓದಬೇಕು. ದೇಶದ ಉತ್ತಮ ನಾಗರಿಕರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್.ತಿಪ್ಪೇಶ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 30 ಕೆನರಾ ಬ್ಯಾಂಕ್ ಶಾಖೆಗಳಿವೆ. ಪ್ರಸ್ತುತ ಕೆನರಾ ಬ್ಯಾಂಕ್‍ನ 13 ಶಾಖೆಯ ಪ್ರತಿ ಶಾಖೆಗೆ ತಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾಖೆಗಳಲ್ಲಿಯೂ ಕೆನರಾ ವಿದ್ಯಾಜ್ಯೋತಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಸಹಾಯಕ ಜನರಲ್ ಮ್ಯಾನೇಜರ್ ವೈವಿನ್ ಶಿವಪ್ರಸಾದ್ ಸೇರಿದಂತೆ ಕೆನರಾ ಬ್ಯಾಂಕ್ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು, ಶಾಲೆಯ ಶಿಕ್ಷಕರು ಇದ್ದರು.