ಚಿತ್ರದುರ್ಗ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಒಟ್ಟು 35 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಈ ಚೆಕ್‍ಪೋಸ್ಟ್‍ಗಳ ಕಾರ್ಯವೈಖರಿ ಕುರಿತಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರು ಶನಿವಾರ ಖುದ್ದಾಗಿ ಅಂತರಾಜ್ಯ ಗಡಿ ಭಾಗದ ಚೆಕ್‍ಪೋಸ್ಟ್ ಸೇರಿದಂತೆ ವಿವಿಧ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ರದುರ್ಗ-ಚಳ್ಳಕೆರೆ ಮಾರ್ಗದಲ್ಲಿ ಬರುವ ಕೆಳಗಳಹಟ್ಟಿ ಗೇಟ್‍ಬಳಿ ಸ್ಥಾಪಿಸಿರುವ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಚೆಕ್‍ಪೋಸ್ಟ್‍ನಲ್ಲಿ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ, ಕೆಲವು ವಾಹನಗಳನ್ನು ತಡೆದು, ಖುದ್ದಾಗಿ ತಪಾಸಣೆ ಮಾಡಿಸಿದರು. ಚೆಕ್‍ಪೋಸ್ಟ್‍ನಲ್ಲಿನ ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ಸೂಚನೆ ನೀಡಿದ ಅವರು, ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಜನರಿಗೆ ಆಮಿಷವೊಡ್ಡಲು ಹಲವು ಬಗೆಯಲ್ಲಿ ಪ್ರಯತ್ನಗಳು ನಡೆಯುವ ಸಾಧ್ಯತೆಗಳಿರುತ್ತವೆ. ಹೆಚ್ಚಿನ ಮೊತ್ತದ ನಗದು ಹಣ, ಸೀರೆ, ಕುಕ್ಕರ್, ಪಾತ್ರೆ, ಬಟ್ಟೆಗಳು ಮತ್ತಿತರ ಸಾಮಗ್ರಿಗಳನ್ನು ಅಕ್ರಮವಾಗಿ ಸಾಗಣೆ ಮಾಡುವ ಸಂಭವವಿರುತ್ತದೆ. ಹೀಗಾಗಿ ಮೈಯೆಲ್ಲಾ ಕಣ್ಣಾಗಿ, ವಾಹನಗಳ ತಪಾಸಣೆ ನಡೆಸಬೇಕು. ತಪಾಸಣೆ ಕಾರ್ಯದ ವಿಡಿಯೋ ಚಿತ್ರೀಕರಣ ಮಾಡಬೇಕು. ಯಾವುದೇ ಸಾಮಗ್ರಿಗಳ ಸಾಗಣೆ ಬಗ್ಗೆ ಸಂಶಯ ಬಂದಲ್ಲಿ ಸಮಗ್ರವಾಗಿ ತಪಾಸಣೆ ನಡೆಸಿ, ಅಕ್ರಮ ಕಂಡುಬಂದಲ್ಲಿ ಕೂಡಲೆ ಕ್ರಮ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಚೆಕ್‍ಪೋಸ್ಟ್‍ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವುದರಿಂದ, ಸರದಿ ಆಧಾರದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಂಬಂಧಪಟ್ಟ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಚುನಾವಣೆ ಕರ್ತವ್ಯದಲ್ಲಿ ಯಾವುದೇ ನಿರ್ಲಕ್ಷ್ಯ ತೋರುವಂತಿಲ್ಲ. ಎಂದು ಸೂಚನೆ ನೀಡಿದರು.
ಎಂಸಿಸಿ ನೋಡಲ್ ಅಧಿಕಾರಿಯಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್ ಅವರು ಮಾದರಿ ನೀತಿ ಸಂಹಿತೆ ಪಾಲನೆಗೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚೆಕ್‍ಪೋಸ್ಟ್ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು. ಎಸ್.ಪಿ. ಪರಶುರಾಮ್ ಅವರು ಚೆಕ್‍ಪೋಸ್ಟ್‍ಗಳಲ್ಲಿನ ಪೊಲೀಸ್ ಸಿಬ್ಬಂದಿಗೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದರು.
ಚಳ್ಳಕೆರೆ ನಗರ, ನಾಯಕನಹಟ್ಟಿ ಬಳಿಯ ಚೆಕ್‍ಪೋಸ್ಟ್‍ಗಳ ಪರಿಶೀಲನೆ ಬಳಿಕ ಬಳ್ಳಾರಿ ಜಿಲ್ಲೆಯ ಗಡಿ ಭಾಗದ ಚೆಕ್‍ಪೋಸ್ಟ್‍ಗಳು, ಅಲ್ಲದೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ನೆರೆಯ ಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿರುವ ಕಣಕುಪ್ಪೆ, ಯದ್ದೆಲ ಬೊಮ್ಮನಹಟ್ಟಿ ಮುಂತಾದ ಚೆಕ್‍ಪೋಸ್ಟ್‍ಗಳಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ಹಾಗೂ ಎಸ್.ಪಿ ಅವರು ತಪಾಸಣಾ ಕಾರ್ಯದ ಪರಿಶೀಲನೆ ನಡೆಸಿದರು.
ಮೊಳಕಾಲ್ಮೂರು ಕ್ಷೇತ್ರ ಚುನಾವಣಾಧಿಕಾರಿ ರಮೇಶ್, ತಹಸಿಲ್ದಾರ್ ರೂಪಾ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.