ಹೊಳಲ್ಕೆರೆ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಜೆ ತರಲು ಜನ ಕಾತರರಾಗಿದ್ದಾರೆ ಎಂದು ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಎಚ್.ಡಿ.ಪುರ, ಮಲ್ಲಾಡಿಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
2013ರಲ್ಲಿ ಸಿದ್ಧರಾಮಯ್ಯನವರ ಅಧಿಕಾರಾವಧಿ ಸುವರ್ಣಯುಗವಾಗಿತ್ತು. ರಾಜ್ಯದ ಹಿಂದುಳಿದ ಬಡವರು, ಕೂಲಿಕಾರ್ಮಿಕರು, ಯುವಕರಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಲಾಗಿತ್ತು ಎಂದರು.
ಈಗಿನ ಯುವಕರಿಗೆ ಇತಿಹಾಸದ ಮಾರ್ಗವನ್ನು ತಪ್ಪಿಸುವ ಕೆಲಸ ಬಿಜೆಯವರು ಮಾಡುತ್ತಿದ್ದಾರೆ. ಮೇಲು ಕೀಳು ಜನರ ಮಧ್ಯೆ ಎತ್ತಿಕಟ್ಟುವ ಕೆಲಸ ನಡೆಯುತ್ತಲೇ ಇದೆ. ಇದು ಇಂದಿಗೂ ನಿಂತಿಲ್ಲ ಎಂದು ಹೇಳಿದರು.
2014ರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ಕಾಯ್ದೆ ಗಳನ್ನು ಜಾರಿಗೆ ತಂದಿತು. ಇದರ ವಿರುದ್ದ ಹೋರಾಟ ನಡೆಸಿದ ರೈತರಿಗೆ ದೇಶದ್ರೋಹಿಗಳು ಎನ್ನುವ ಪಟ್ಟ ಕಟ್ಟಲಾಯಿತು. ಇದು ಇಡೀ ದೇಶದ ರೈತರಿಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನಮೋಹನ್ ಸಿಂಗ್ ಅವರ ಅಧಿಕಾರದ ಅವಧಿಯಲ್ಲಿ 72 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡಲಾಯಿತು. ಸಿದ್ದರಾಮಯ್ಯನವರ ಕಾಲದಲ್ಲಿ ರೈತರಿಗೆ ಮತ್ತೆ ರಾಜ್ಯದ ಜನತೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಕೃಷಿ ಹೊಂಡ, ಬಾಡಿಗೆ ಯಂತ್ರೋಪಕರಣಗಳ ವಿತರಣೆ, ಅನ್ನಭಾಗ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ರೂಪಿಸಲಾಗಿತ್ತು ಎಂದರು.
ರೈತರ ಪರ, ಚಿಂತನೆ ಇಲ್ಲದ ಬಿಜೆಪಿಯನ್ನು ಅಧಿಕಾರದಿಂದ ಕಿತ್ತುಹಾಕಲು ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್ ಪಕ್ಷವು ಬಡವರ ಪರವಿದೆ. ಈ ಹಿಂದೆ ಶಿಕ್ಷಣ ವ್ಯವಸ್ಥೆ ಕೇವಲ ಉಳ್ಳವರ ಪರ ಮಾತ್ರವಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಬ್ಬರ ಅಕ್ಷರವಂತರಾಗಬೇಕು ಎನ್ನುವುದನ್ನು ಗಮನಿಸಿ ಲಕ್ಷಾಂತರ ಶಾಲೆಗಳನ್ನು ತೆರೆಯಲಾಯಿತು ಎಂದರು.
ಈಚಘಟ್ಟ, ನಗರಘಟ್ಟ, ಹೆಚ್.ಡಿ.ಪುರ, ಮಲ್ಲಾಡಿಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ನಟಿ ಉಮಾಶ್ರೀ ಅವರು, ಆಂಜನೇಯ ಪರ ಮತಯಾಚಿಸಿದರು.
ಹಿರಿಯ ನಟಿ ಆಗಮನದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಯಿಸಿದ್ದರು. ಅವರ ಕೈಕುಲಕಿ, ಅವರೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ಮಾಜಿ ಶಾಸಕ ಎ.ವಿ.ಉಮಾಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಟಿ.ಹನುಮಂತಪ್ಪ, ಎಂ.ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಸದಸ್ಯರಾದ ಇಂದಿರಾಕಿರಣ್, ಡಿ.ಕೆ.ಶಿವಮೂರ್ತಿ, ಎಸ್.ಜೆ.ರಂಗಸ್ವಾಮಿ, ಲೋಹಿತ್ ಕುಮಾರ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಕೆಪಿಸಿಸಿ ಮಾನವ ಹಕ್ಕುಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಂದು ಗೌಡ, ಜಿಲ್ಲಾ ಓ.ಬಿ.ಸಿ ಪ್ರಧಾನ ಕಾರ್ಯದರ್ಶಿ ಎ.ಎಸ್.ಅಶೋಕ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಜರ್ ಉಲ್ಲಾಖಾನ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಧುಪಾಲೆಗೌಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಡಿ.ರಂಗಯ್ಯ, ಎಚ್.ಡಿ.ಪುರ ಗ್ರಾಪಂ ಅಧ್ಯಕ್ಷೆ ಶಿಲ್ಪ ಪ್ರಕಾಶ್, ಬೋವಿ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಮುಖಂಡರಾದ ವೈಶಾಖ್, ಮತ್ತಿಗಟ್ಟ ದಿವಾಕರ್, ಅಜ್ಜಣ್ಣ ಮಾಯಣ್ಣ, ಮಹಾರುದ್ರಣ್ಣ ವೈಶಾಖ್ ಯಾದವ್, ರಮೇಶ್ ಉಪಸ್ಥಿತರಿದ್ದರು.